ಸೋಬರ್ಸ್‌, ಕಪಿಲ್ ದೇವ್​ ಸಾಲಿಗೆ ಸೇರಿದ ಇಂಗ್ಲೆಂಡ್​ ಆಲ್ರೌಂಡರ್​ ಬೆನ್ ಸ್ಟೋಕ್ಸ್

stokes all
Published on

ಸೌಥಾಂಪ್ಟನ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸಾಧನೆಯೊಂದನ್ನು ದಾಖಲಿಸಿದ್ದಾರೆ. ಈ ಮೂಲಕ ಅವರು ಆಲ್ರೌಂಡ್ ದಿಗ್ಗಜರಾದ ಗ್ಯಾರಿ ಸೋಬರ್ಸ್‌ ಮತ್ತು ಕಪಿಲ್ ದೇವ್ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಹಾಗಾದರೆ ಅವರು ಮಾಡಿದ ವಿಶೇಷವಾದ ಸಾಧನೆ ಏನು ಗೊತ್ತೇ?

ವಿಂಡೀಸ್ ವಿರುದ್ಧದ ಕರೋನಾ ಕಾಲದ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ 150 ವಿಕೆಟ್ ಪೂರೈಸಿದರು. ಈ ಮೂಲಕ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 4 ಸಾವಿರ ರನ್ ಮತ್ತು 150 ವಿಕೆಟ್ ಪಡೆದ ಅಪರೂಪದ ಆಲ್ರೌಂಡರ್‌ಗಳ ಸಾಲಿಗೆ ಸೇರಿದರು. ವೆಸ್ಟ್ ಇಂಡೀಸ್‌ನ ಗ್ಯಾರಿ ಸೋಬರ್ಸ್‌(8032 ರನ್, 235 ವಿಕೆಟ್), ಇಂಗ್ಲೆಂಡ್‌ನ ಇಯಾನ್ ಬಾಥಂ (5200 ರನ್, 383 ವಿಕೆಟ್), ಭಾರತದ ಕಪಿಲ್ ದೇವ್ (5248 ರನ್, 434 ವಿಕೆಟ್), ದಕ್ಷಿಣ ಆಫ್ರಿಕಾದ ಜಾಕ್ಸ್ ಕ್ಯಾಲಿಸ್ (13,289 ರನ್, 292 ವಿಕೆಟ್ ), ನ್ಯೂಜಿಲೆಂಡ್‌ನ ಡೇನಿಯಲ್ ವೆಟ್ಟೋರಿ (4531 ರನ್, 362 ವಿಕೆಟ್) ಅವರಂಥ ಆಲ್ರೌಂಡ್ ಸಾಧಕರ ಸಾಲಿಗೆ ಸೇರ್ಪಡೆಗೊಂಡರು.

ವೆಸ್ಟ್ ಇಂಡೀಸ್ ತಂಡದ ಮೊದಲ ಇನಿಂಗ್ಸ್‌ನಲ್ಲಿ 49 ರನ್‌ಗೆ 4 ವಿಕೆಟ್ ಕಬಳಿಸಿ ನಾಯಕನ ಆಟವಾಡಿದ ಸ್ಟೋಕ್ಸ್, ಎದುರಾಳಿ ನಾಯಕ ಜೇಸನ್ ಹೋಲ್ಡರ್ ವಿಕೆಟ್ ಕಬಳಿಸಿದ ವೇಳೆ ಈ ಸಾಧನೆ ಮಾಡಿದರು. ಈ ಮೂಲಕ ಗ್ಯಾರಿ ಸೋಬರ್ಸ್‌ ಬಳಿಕ ಅತಿವೇಗದ ಸಾಧನೆ ಮಾಡಿದರು. 64 ಟೆಸ್ಟ್‌ಗಳಲ್ಲಿ ಸ್ಟೋಕ್ಸ್ 4099 ರನ್ ಬಾರಿಸಿದ್ದಾರೆ. ಸೋಬರ್ಸ್‌ 63 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಕಪಿಲ್ ದೇವ್ 97 ಟೆಸ್ಟ್ ಆಡಿದ್ದರು. ಬಾಥಂ 69 ಮತ್ತು ಕಾಲಿಸ್ 69 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net