

ಲಂಡನ್: ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ತಂಡದ ಆಫ್-ಸ್ಪಿನ್ನರ್ ಲೌರಾ ಮಾರ್ಷ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ್ದಾರೆ. 2009ರ ಟಿ20 ಮತ್ತು 2017ರ ಏಕದಿನ ವಿಶ್ವಕಪ್ ಜಯಿಸಿದ ತಂಡದ ಪ್ರಮುಖ ಆಟಗಾರ್ತಿಯಾಗಿದ್ದ 33 ವರ್ಷದ ಲೌರಾ ಮಾರ್ಷ್, 103 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿ 129 ವಿಕೆಟ್ ಕಬಳಿಸಿದ್ದಾರೆ. 9 ಟೆಸ್ಟ್ ಮತ್ತು 67 ಟಿ20 ಪಂದ್ಯಗಳನ್ನೂ ಆಡಿದ್ದು, ಕ್ರಮವಾಗಿ 24 ಮತ್ತು 64 ವಿಕೆಟ್ ಕಬಳಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಲೌರಾ, ಇದೀಗ ದೇಶೀಯ ಕ್ರಿಕೆಟ್‌ನಿಂದಲೂ ನಿವೃತ್ತಿ ಹೊಂದಿದ್ದಾರೆ. ಈ ವರ್ಷ ದಿ ಹಂಡ್ರೆಡ್ ಟೂರ್ನಿಯಲ್ಲಿ ಆಡುವ ಹಂಬಲವನ್ನು ಅವರು ಹೊಂದಿದ್ದರು. ಆದರೆ ಕರೊನಾ ಹಾವಳಿಯಿಂದಾಗಿ ಈ ಟೂರ್ನಿ ಮುಂದೂಡಲ್ಪಟ್ಟಿದೆ.
11ನೇ ವಯಸ್ಸಿನಲ್ಲೇ ಕ್ರಿಕೆಟ್ ಆಡಲಾರಂಭಿಸಿದ್ದ ಲೌರಾ, ಮೊದಲು ಮಧ್ಯಮ ವೇಗದ ಬೌಲರ್ ಆಗಿದ್ದರು. ಬಳಿಕ ಸ್ಪಿನ್ ಬೌಲರ್ ಆಗಿ ಉತ್ತಮ ಯಶಸ್ಸು ಕಂಡಿದ್ದರು.