

ಬೆಂಗಳೂರು: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ದಿನಗಣನೆ ಆರಂಭಗೊಂಡಿದೆ. ತಂಡಗಳ ಪರಸ್ಪರ ಕಾಲೆಳೆಯುವ ಭರಾಟೆಯೂ ಜೋರಾಗಿಯೇ ಸಾಗಿದೆ. ಮೊನ್ನೆಯಷ್ಟೇ ವಿಶ್ವ ಸಿಂಹ ದಿನದ ಅಂಗವಾಗಿ ನಾಯಕ ವಿರಾಟ್ ಕೊಹ್ಲಿಯನ್ನು ಸಿಂಹಕ್ಕೆ ಹೋಲಿಸಿ ಆರ್ಸಿಬಿ ಟ್ವೀಟ್ ಮಾಡಿತು. ಜತೆಗೆ ಅಭಿಮಾನಿಗಳು ಸಿಂಹ ಹಾಗೂ ಕೊಹ್ಲಿ ನಡುವಿನ ವ್ಯತ್ಯಾಸ ಗುರಿತಿಸಿ ಎಂದು ಹೇಳಲಾಗಿತ್ತು. ಇದಕ್ಕೆ ಸಿಎಸ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆರ್ಸಿಬಿ ಕಾಲೆಳೆಯುವ ಮೂಲಕ ಚರ್ಚೆ ನಾಂದಿ ಹಾಡಿದೆ.
ಆರ್ಸಿಬಿ ಚಿತ್ರಕ್ಕೆ ಪ್ರತಿಕ್ರಿಯಿಸಿದ್ದ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್, ಒಂದು ಬಟ್ಟೆಹಾಕದ ಸಿಂಹವಾದರೆ, ಮತ್ತೊಂದು ಬಟ್ಟೆಹಾಕಿದ ಸಿಂಹ ಎಂದು ಪ್ರತಿಕ್ರಿಯಿಸಿದ್ದರು. ಆದರೆ, ತಂಡದ ಸಾಂಪ್ರದಾಯಿಕ ಎದುರಾಳಿ ಸಿಎಸ್ಕೆ, ಅಮ್ಮ ದಿನಾಲೂ ಅಳುತ್ತಾರೆ, ಎಲ್ಲಿಗೆ ಹೋಗುತ್ತಿದ್ದೀಯಾ ಎಂದು? ನಿಮ್ಮ ಕೂದಲಿಗೆ ಏನು ಮಾಡಿದ್ದೀರಿ ಎಂದು ರಿಟ್ವೀಟ್ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಪ್ರಕಟಿಸಿದ ಪ್ರತಿಕ್ರಿಯೆಯನ್ನು ಸಾವಿರಾರು ಮಂದಿ ರಿಟ್ವೀಟ್ ಮಾಡಿದ್ದು, 7 ಸಾವಿರ ಮಂದಿ ಪ್ರತಿಕ್ರಿಯಿಸಿದ್ದಾರೆ. ಕಳೆದ ಉಭಯ ತಂಡಗಳು ಪರಸ್ಪರ ಆಡಿದ 2 ಪಂದ್ಯಗಳಲ್ಲಿ ತಲಾ 1 ಗೆಲುವು, ಸೋಲು ಕಂಡಿದ್ದವು.