

ಚಂಡೀಗಢ: ಭಾರತದ ಹಾಕಿ ದಂತಕಥ ಬಲಬೀರ್ ಸಿಂಗ್ ಸೀನಿಯರ್ ಪಂಜಾಬಿನ ಮೊಹಾಲಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ 6.30ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಎರಡು ವಾರಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರು ಒಬ್ಬ ಪುತ್ರಿ ಸುಶಬೀರ್, ಮೂವರು ಪತ್ರರಾದ ಕನ್ವಲ್ಬೀರ್, ಕರಣಬೀರ್, ಗುರುಬೀರ್ ಅವರನ್ನು ಅಗಲಿದ್ದಾರೆ. ಪುತ್ರರು ಕೆನಡಾದಲ್ಲಿ ನೆಲೆಸಿದ್ದಾರೆ. ಸೀನಿಯರ್ ಪುತ್ರಿ ಸುಷಬೀರ್ ಮತ್ತು ಮೊಮ್ಮಗ ಕಬೀರ್ ಜತೆಗೆ ವಾಸವಿದ್ದರು. ಮೇ 8ರಂದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 18ರಿಂದ ಅವರು ಅರೆ ಕೋಮಾದಲ್ಲಿದ್ದರು. ಮುದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದಲ್ಲದೆ, ನ್ಯುಮೋನಿಯಾ, ಭಾರಿ ಜ್ವರ ಕಾಡಿತ್ತು. ಅವರಿಗೆ ಕೋವಿಡ್ 19 ಟೆಸ್ಟ್ ಕೂಡ ಮಾಡಿಸಲಾಗಿದ್ದು, ಅದರ ಸೋಂಕು ತಗುಲಿರಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿದ್ದು ಚಿಕಿತ್ಸೆಪಡೆದಿದ್ದರು.
ಇದನ್ನೂ ಓದಿ: ತಿಮ್ಮಪ್ಪನ ಸ್ಥಿರಾಸ್ತಿ ಹರಾಜಿಗೆ ವಿರೋಧ
ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿ ಆಧುನಿಕ ಒಲಿಂಪಿಕ್ ಇತಿಹಾಸಕ್ಕಾಗಿ ಆಯ್ಕೆ ಮಾಡಿದ 16 ದಿಗ್ಗಜರ ಪೈಕಿ ಸೀನಿಯರ್ ಸಿಂಗ್ ಒಬ್ಬರೇ ಆಯ್ಕೆಯಾಗಿದ್ದರು. ಇವರು ಮೂರು ಸಲ ಒಲಿಂಪಿಕ್ ಗೋಲ್ಡ್ ಮೆಡೆಲ್ ವಿಜೇತರು. ಲಂಡನ್ ಒಲಿಂಪಿಕ್ಸ್ (1948), ಹೆಲ್ಸಿನ್ಕಿ (1952) ಒಲಿಂಪಿಕ್ನಲ್ಲಿ ವೈಸ್-ಕ್ಯಾಪ್ಟನ್ ಆಗಿಯೂ, ಮೆಲ್ಬೋರ್ನ್(1956) ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಕ್ಯಾಪ್ಟನ್ ಆಗಿಯೂ ಗೋಲ್ಡ್ ಮೆಡಲ್ ಸಂಪಾದಿಸಿದ್ದರು. ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಗರಿಷ್ಠ ಗೋಲು ಬಾರಿಸಿದ ವಿಶ್ವದಾಖಲೆ ಸೀನಿಯರ್ ಹೆಸರಿನಲ್ಲಿದ್ದು, ಅದನ್ನು ಇದುವರೆಗೂ ಯಾರೂ ಮುರಿದಿಲ್ಲ. 1952ರ ಹೆಲ್ಸಿನ್ಕಿ ಗೇಮ್ಸ್ನಲ್ಲಿ ನೆದರ್ಲೆಂಡ್ ವಿರುದ್ಧ ಭಾರತ 6-1 ರ ಅಂತರ ಗೆಲುವು ದಾಖಲಿಸಿತ್ತು. ಇದರಲ್ಲಿ ಐದು ಗೋಲುಗಳನ್ನೂ ಸೀನಿಯರ್ ಸಂಪಾದಿಸಿದ್ದರು. 1957ರಲ್ಲಿ ಸೀನಿಯರ್ ಅವರನ್ನು ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಅದೇ ಮೊದಲ ಅಂಥ ಉನ್ನತ ಪುರಸ್ಕಾರ ಕ್ರೀಡಾಪಟುವೊಬ್ಬರು ಆಯ್ಕೆಯಾಗಿದ್ದು. ಆ ದಾಖಲೆಯೂ ಅವರ ಪಾಲಾಗಿತ್ತು.
ಇದನ್ನೂ ಓದಿ: ವಿಶ್ವಗುರು: ಅಮೆರಿಕದ ದಾಳಕ್ಕೆ ಚೀನಾ ಪತರಗುಟ್ಟುವುದೇ?
ಧ್ಯಾನ್ಚಂದ್ ಅವರ ಕೌಶಲದ ಜತೆಗೆ ಹೋಲಿಕೆಗೆ ಪರಿಗಣಿಸಲಾಗುತ್ತಿದ್ದ ಸೀನಿಯರ್ ಭಾರತೀಯ ಹಾಕಿ ಸ್ಟಾರ್ಗಳ ಪೈಕಿ ವೈಯಕ್ತಿಕವಾಗಿ ಹೆಚ್ಚು ಜನಪ್ರಿಯರಾದವರು. ಧ್ಯಾನ್ಚಂದ್ ಮತ್ತು ಸೀನಿಯರ್ ಎಂದಿಗೂ ಒಟ್ಟಿಗೆ ಆಡಿರಲಿಲ್ಲ. ಆದರೂ ಇವರಿಬ್ಬರೂ ಹಾಕಿ ಆಟಗಾರರಿಗೆ ಆದರ್ಶಪ್ರಾಯರು, ಪ್ರೇರಣೆಯಾಗಿ ಗುರುತಿಸಿಕೊಂಡವರು. ಸೀನಿಯರ್ ಅವರು ಪಂಜಾಬಿನ ಖಲ್ಸಾ ಗ್ರಾಮದಲ್ಲಿ 1924ರಲ್ಲಿ ಜನಿಸಿದರು. ಖಲ್ಸಾ ಕಾಲೇಜಿನಲ್ಲಿದ್ದಾಗ ಹರ್ಬೈಲ್ ಸಿಂಗ್ ಅವರು ಸೀನಿಯರ್ ಪ್ರತಿಭೆ ಗುರುತಿಸಿದವರು. ಅವರ ತರಬೇತಿಯಲ್ಲಿ ಪಳಗಿದವರು ಸೀನಿಯರ್.ಇಂಥ ಸೀನಿಯರ್ಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಕೆಲವು ವರ್ಷಗಳ ಹಿಂದೆ ಪತ್ರಬರೆದಿದ್ದರು. (ಏಜೆನ್ಸೀಸ್)