

ಚೆನ್ನೈ: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿಯು ತಮಿಳುನಾಡಿನ ವಿವಿಧ ಭಾಗದಲ್ಲಿ ಹೊಂದಿರುವ 23 ಸ್ಥಿರಾಸ್ತಿಗಳನ್ನು ಹರಾಜು ಹಾಕಲು ಮುಂದಾಗಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.
ತಿಮ್ಮಪ್ಪ ದೇವರಿಗೆ ಉಂಬಳಿಯಾಗಿ ನೀಡಿರುವ ಜಮೀನು ಇನ್ನಿತರ ಆಸ್ತಿಗಳನ್ನು ಹರಾಜು ಹಾಕುವ ಆಲೋಚನೆಯನ್ನು ಟಿಟಿಡಿ ಬಿಡಬೇಕು. ಆಸ್ತಿಗಳನ್ನು ಮಾರಾಟ ಮಾಡಿದರೆ ಅವುಗಳನ್ನು ದಾನವಾಗಿ ನೀಡಿದ ಭಕ್ತರಿಗೆ ನೋವುಂಟಾಗುತ್ತದೆ ಎಂದು ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ಕಣ್ಣ ಲಕ್ಷ್ಮಿನಾರಾಯಣ ಹೇಳಿದ್ದಾರೆ.
ಕರೊನಾ ಕಾರಣ ತೀವ್ರ ನಷ್ಟದಲ್ಲಿರುವ ಟಿಟಿಡಿ, ಆಸ್ತಿ ಹರಾಜಿನ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಿಲು ಮುಂದಾಗಿತ್ತು. ನಿರ್ವಹಣೆ ಮಾಡಲು ಕಾರ್ಯಸಾಧುವಲ್ಲದ ಕೃಷಿ ಜಮೀನು, ವಸತಿ, ನಿವೇಶನ ಮತ್ತು ಖಾಲಿ ಉಳಿದ ಭೂಮಿ ಸೇರಿ 23 ಆಸ್ತಿಗಳನ್ನು ಸಾರ್ವಜನಿಕ ಹರಾಜು ಹಾಕಲು ನಿರ್ಧರಿಸಿತ್ತು.