

ಬೆಂಗಳೂರು ಗ್ರಾಮಾಂತರ: ಬಿಹಾರದ ಪಾಟ್ನಾದಲ್ಲಿ ನಡೆಯುವ ನ್ಯಾಷನಲ್ ಇಂಟರ್ ಡಿಸ್ಟ್ರಿಕ್ಟ್ ಜೂನಿಯರ್ ಅಥ್ಲೆಟಿಕ್ ಮೀಟ್ 2023ರ ಕ್ರೀಡಾಕೂಟಕ್ಕೆ ದೊಡ್ಡಬಳ್ಳಾಪುರದ 8 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
3 ದಿನ ಕ್ರೀಡಾಕೂಟ: ಫೆ.10ರಿಂದ 12ರವರೆಗೆ ಕ್ರೀಡಾಕೂಟ ನಡೆಯಲಿದ್ದು, ಕಳೆದ ಡಿಸೆಂಬರ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗೆಲ್ಲುವ ಮೂಲಕ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಇವರು ಆಯ್ಕೆಯಾಗಿದ್ದು, ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಗ್ರಾಮೀಣ ಹಿನ್ನೆಲೆ ಮತ್ತು ಕೂಲಿ ಕಾರ್ಮಿಕ ಕುಟುಂಬದಿಂದ ಬಂದಿರುವ ಕ್ರೀಡಾಪಟುಗಳು ಕ್ರೀಡೆಯಲ್ಲಿ ಸಾಧನೆಯ ಕನಸು ಕಾಣುತ್ತಿದ್ದಾರೆ.
ಕೋಚ್ ಆನಂದ್ ಮಾರ್ಗದರ್ಶನ: ತನುಶ್ರೀ ಟ್ರಯಥ್ಲಾನ್ ವಿಭಾಗದಲ್ಲಿ, ರಾಹುಲ್ ಮತ್ತು ಸಿಂಚನಾ ಹೆಕ್ಸಾಥ್ಲಾನ್ ವಿಭಾಗದಲ್ಲಿ, ನಿತೀನ್ ಗೌಡ ಮತ್ತು ವಿ. ದಿವ್ಯಾ 600 ಮೀಟರ್ ಓಟದಲ್ಲಿ, ಕಿಶನ್‌ಚಂದ್ರ ಮತ್ತು ಆರ್.ರುಚಿತಾ ಜಾವಲಿನ್ ಥ್ರೋ ವಿಭಾಗದಲ್ಲಿ, ಚೇತನ್ 1600 ಮೀಟರ್ ಓಟದಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ತರಬೇತುದಾರ ಎಚ್.ಎನ್.ಆನಂದ್‌ಕುಮಾರ್ ತಿಳಿಸಿದ್ದಾರೆ.
ಮುಂಜಾನೆಯಿಂದಲೇ ಪ್ರಾಕ್ಟಿಸ್: ಉತ್ತರಭಾರತದಲ್ಲಿ ಚಳಿ ಕ್ರೀಡಾಪಟುಗಳಿಗೆ ದೊಡ್ಡ ಸವಾಲಾಗಿದೆ, ಚಳಿಯನ್ನು ಲೆಕ್ಕಿಸದೆ ಕ್ರೀಡೆಯಲ್ಲಿ ಜಯಿಸುವ ಕನಸು ಕಾಣುತ್ತಿರುವ ಕ್ರೀಡಾಪಟುಗಳು ಪ್ರತಿದಿನ ಮುಂಜಾನೆ 5 ಗಂಟೆಯಿಂದಲೇ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ.