ಶಾಸಕರ ಸ್ಟಿಕ್ಕರ್​​ ಇರುವ ಕಾರಿಗೆ ದ್ವಿಚಕ್ರ ವಾಹನ ಸವಾರ ಬಲಿ; ತಲೆ ಮೇಲೇ ಹರಿದು ಹೋದ ಕಾರು!

Car
Published on

ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಂದು ಭೀಕರ ಕೇಸ್ ಆಗಿದ್ದು, ಶಾಸಕರೊಬ್ಬರ ಸ್ಟಿಕ್ಕರ್ ಇರುವ ಕಾರೊಂದು ದ್ವಿಚಕ್ರವಾಹನ ಸವಾರನ ತಲೆ ಮೇಲೇ ಹಾದು ಹೋಗಿದೆ. ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್​ ಕೋರ್ಟ್ ಬಳಿಯೇ ಈ ಘಟನೆ ಸಂಭವಿಸಿದೆ.

ಅತಿವೇಗವಾಗಿ ಬಂದ ಇನ್ನೋವಾ ಕಾರು (ಕೆಎ 50 ಎಂಎ 6600) ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದಿತ್ತು. ಮಾತ್ರವಲ್ಲದೆ ಬಿದ್ದ ಆತನ ತಲೆ ಮೇಲೆ ವಾಹನ ಹಾದುಹೋಗಿದೆ. ಗಂಭೀರವಾಗಿ ಗಾಯಗೊಂಡ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ.

ಎಚ್​ಎಸ್​ಆರ್​ ಬಡಾವಣೆ ನಿವಾಸಿ ಮಾಜಿದ್ ಖಾನ್​ (39) ಸಾವಿಗೀಡಾದ ವ್ಯಕ್ತಿ. ಈತ ಆಟೋಮೊಬೈಲ್ಸ್​ ಅಂಗಡಿ ಇಟ್ಟುಕೊಂಡಿದ್ದಾನೆ. ಇನ್ನೊಬ್ಬ ವ್ಯಕ್ತಿ ರಿಯಾಜ್ ಎಂಬಾತನ ಕಾಲು ಮುರಿತಕ್ಕೆ ಒಳಗಾಗಿದ್ದು, ತಲೆಗೂ ಗಾಯವಾಗಿದೆ. ಈತನನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಇನ್ನೂ ಮೂವರಿಗೆ ಗಾಯಗಳಾಗಿವೆ.

ಗಂಟೆಗೆ ಸುಮಾರು 80ರಿಂದ 100 ಕಿ.ಮೀ. ಸ್ಪೀಡ್​ನಲ್ಲಿದ್ದ ಕಾರು ಚಾಲಕ ಅಪಘಾತದ ಬಳಿಕ ವಾಹನ ಸೈಡ್​ಗೆ ಹಾಕಿದ್ದ. ಕಾರು ರಾಮು ಸುರೇಶ್ ಎಂಬವರ ಹೆಸರಿನಲ್ಲಿ ಇರುವುದು ತಿಳಿದು ಬಂದಿದೆ. ಮಾತ್ರವಲ್ಲ ಕಾರಿನ ಮೇಲೆ ಸಾಗರ ಶಾಸಕ ಹರತಾಳು ಹಾಲಪ್ಪ ಅವರ ಸ್ಟಿಕ್ಕರ್ ಇದೆ. ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಚಾಲಕ ಕುಡಿದು ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದ್ದು, ತನಿಖೆ ನಡೆಯುತ್ತಿದೆ. ಸ್ಥಳಕ್ಕೆ ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net