ಸೋಲಿನೊಂದಿಗೆ ಅಭಿಯಾನ ಆರಂಭ; ಆರ್​ಸಿಬಿ ನಾಯಕ ಫಾಫ್​ ನೀಡಿದ ಕಾರಣ ಹೀಗಿದೆ

faf du plesi
Published on

ಚನ್ನೈ: ಹೊಸ ಅಧ್ಯಾಯವನ್ನು ಹಳೇ ಅಭ್ಯಾಸದೊಂದಿಗೆ 17ನೇ ಆವೃತ್ತಿಯ ಐಪಿಎಲ್​ ಅಭಿಯಾನವನ್ನು ಶುರು ಮಾಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಹಾಲಿ ಚಾಂಪಿಯನ್ಸ್​ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 6 ವಿಕೆಟ್​ಗಳ ಸೋಲು ಕಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 176 ರನ್ ಗಳಿಸಿದರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಸಿಎಸ್​ಕೆ 6 ವಿಕೆಟ್​ಗಳ ಜಯ ಸಾಧಿಸಿತು. ಈ ಬಗ್ಗೆ ನಾಯಕ ಫಾಫ್​​ ಡು ಪ್ಲೆಸಿಸ್​ ಮಾತನಾಡಿದ್ದು, ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಪಂದ್ಯದ ಬಳಿಕ ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಫಾಫ್​, ಬಹುಶಃ ನಾವು ಸುಮಾರು 15 ರಿಂದ 20 ರನ್ ಕಡಿಮೆ ಹೊಡೆದೆವು, ಇದು ಸೋಲಿಗೆ ಕಾರಣವಾಯಿತು. ಪಿಚ್ ನಾವು ಮೊದಲ 10 ಓವರ್‌ಗಳಲ್ಲಿ ಆಡಿದಷ್ಟು ಕೆಟ್ಟದಾಗಿರಲಿಲ್ಲ. ಅವರು ಚೇಸಿಂಗ್‌ನಲ್ಲಿ ಮುಂದಿದ್ದರು, ನಾವು ಅವರನ್ನು ಕಟ್ಟಿ ಹಾಕಲು ಮತ್ತು ಒಂದೆರಡು ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸಿದೆವು, ಆದರೆ ಕೊನೆಯಲ್ಲಿ ನಮ್ಮ ಬಳಿ ಸಾಕಷ್ಟು ರನ್ ಇರಲಿಲ್ಲ.

ನೀವು ಯಾವಾಗಲೂ ಆಡುವಾಗ, ಆರು ಓವರ್‌ಗಳ ನಂತರ ಸ್ವಲ್ಪ ಡಿಪ್ ಪಡೆಯುತ್ತೀರಿ. ಈ ಪಂದ್ಯದ ಮಧ್ಯಮ ಓವರ್‌ಗಳಲ್ಲಿ ಚೆನ್ನೈ ಉತ್ತಮ ಬೌಲಿಂಗ್ ಪ್ರದರ್ಶಿಸಿತು. ಅವರು ತಮ್ಮ ಸ್ಪಿನ್ನರ್‌ಗಳಿಂದ ಹಿಡಿತ ಸಾಧಿಸಿದರು. ಈ ಪಿಚ್‌ನಲ್ಲಿ ಯಾವಾಗಲೂ ಮೊದಲು ಬ್ಯಾಟ್ ಮಾಡುವುದು ಉತ್ತಮ. ಕಳೆದ ವರ್ಷ, ಮೊದಲು ಬ್ಯಾಟ್ ಮಾಡಿದ ತಂಡಗಳು ಉತ್ತಮ ದಾಖಲೆ ಹೊಂದಿತ್ತು.

ಚೆಂಡು ನಮ್ಮ ಸ್ಪಿನ್ನರ್‌ಗಳಿಗೆ ನೆರವಾಗುತ್ತಿತ್ತು. ದಿನೇಶ್ ಕಾರ್ತಿಕ್ ಉತ್ತಮವಾಗಿ ಆಡಿದ್ದಾರೆ. ಹೆಚ್ಚು ಕ್ರಿಕೆಟ್ ಆಡದ ಕಾರ್ತಿಕ್ ಒಳ್ಳೆಯ ಕೊಡುಗೆ ನೀಡಿದ್ದಾರೆ. ಅಂತೆಯೆ ಅನುಜ್ ಭರವಸೆಯನ್ನು ತೋರಿಸಿದ್ದಾರೆ ಎಂದು ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಪೋಸ್ಟ್​ ಮ್ಯಾಚ್​ ಪ್ರಸೆಂಟೇಷನ್​ನಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net