More

  IPL 2024; ಸಿಎಸ್​ಕೆ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಎರಡು ದಾಖಲೆ ಬರೆದ ಕಿಂಗ್​ ಕೊಹ್ಲಿ

  ಚೆನ್ನೈ: ರಂಗು ರಂಗಿನ ಮಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​ಗೆ ಮಾರ್ಚ್​ 22ರಂದು ವರ್ಣರಂಜಿತ ಚಾಲನೆ ದೊರೆತ್ತಿದ್ದು, 17ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್​ ಚೆನ್ನೈ ಸೂಪರ್​ಕಿಂಗ್ಸ್​ ಎದುರು ಸೋಲಿನ ಮೂಲಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ತನ್ನ ಅಭಿಯಾನವನ್ನು ಆರಂಭಿಸಿದೆ.

  ಹೊಸ ಅಧ್ಯಾಯ ಆದರೂ ಹಳೇ ಸಂಪ್ರದಾಯದೊಂದಿಗೆ ಅಭಿಯಾನ ಆರಂಭಿಸಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಮಾಜಿ ನಾಯಕ, ರನ್​ ಮೆಷಿನ್ ಎಂದೇ ಖ್ಯಾತಿ ಪಡೆದಿರುವ​ ವಿರಾಟ್​ ಕೊಹ್ಲಿ ಉದ್ಘಾಟನಾ ಪಂದ್ಯದಲ್ಲೇ ವಿಶ್ವದಾಖಲೆ ಒಂದನ್ನು ಬರೆದಿದ್ದಾರೆ. ಈ ಮೂಲಕ ಟಿ-20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  ಐಪಿಎಲ್ ಮೂಲಕ ಬರೋಬ್ಬರಿ 2 ತಿಂಗಳ ನಂತರ ವಿರಾಟ್ ಕೊಹ್ಲಿ ಕ್ರಿಕೆಟ್​ ಲೋಕಕ್ಕೆ ಮರಳಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೊಹ್ಲಿ 6 ರನ್ ಕಲೆಹಾಕಿದ ಕೂಡಲೇ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್ ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ಗಳ ಗಡಿ ದಾಟಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

  Virat Kohli

  ಇದನ್ನೂ ಓದಿ: ನೀನು ಟಿವಿಯಲ್ಲಿ ಬರ್ತಿದ್ದಿಯಾ…; ಸೋನು ಗೌಡ ಕೊಟ್ಟ ರಿಪ್ಲೈಗೆ ದಂಗಾದ ಪೊಲೀಸರು

  360 ಟಿ-20 ಇನ್ನಿಂಗ್ಸ್​ ಆಡಿರುವ ವಿರಾಟ್​ ಕೊಹ್ಲಿ ಈ ಸಾಧನೆ ಮಾಡಿದ ವಿಶ್ವದ ಆರನೇ ಬ್ಯಾಟ್ಸ್​ಮನ್​ ಆಗಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್‌ಗಿಂತ ಮೊದಲು ಕ್ರಿಸ್ ಗೇಲ್, ಶೋಯೆಬ್ ಮಲಿಕ್, ಕೈರಾನ್ ಪೊಲಾರ್ಡ್, ಅಲೆಕ್ಸ್ ಹೇಲ್ಸ್ ಮತ್ತು ಡೇವಿಡ್ ವಾರ್ನರ್ ಇದ್ದಾರೆ. ಆದರೆ, ಅತಿ ವೇಗವಾಗಿ 12000 ರನ್ ಪೂರೈಸಿದ ವಿಚಾರಕ್ಕೆ ಬರುವುದಾದರೆ ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ 343 ಇನ್ನಿಂಗ್ಸ್​ಗಳಲ್ಲಿ 12 ಸಾವಿರ ರನ್ ಪೂರೈಸಿದ್ದರು. ಸದ್ಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗೇಲ್ ಇದುವರೆಗೆ ಟಿ-20 ಮಾದರಿಯಲ್ಲಿ 14562 ರನ್ ಕಲೆಹಾಕಿದ್ದಾರೆ.

  ಇದಲ್ಲದೆ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಒಂದು ಸಾವಿರ ರನ್ ಕೂಡ ಪೂರೈಸಿದ್ದಾರೆ. ಈ ಮೂಲಕ ಸಿಎಸ್​ಕೆ ವಿರುದ್ಧ ಸಾವಿರ ರನ್​ಗಳ ಗಡಿ ಬಾರಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕೊಹ್ಲಿಗಿಂತ ಮೊದಲು ಪಂಜಾಬ್ ನಾಯಕ ಶಿಖರ್ ಧವನ್ ಈ ಸಾಧನೆ ಮಾಡಿದ್ದಾರೆ. ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಒಂದು ಸಾವಿರ ರನ್ ಪೂರೈಸಿರುವ ಕೊಹ್ಲಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸಾವಿರಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಐಪಿಎಲ್​ನಲ್ಲಿ ಎರಡು ತಂಡಗಳ ವಿರುದ್ಧ 1000+ ರನ್ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts