ಟೀಮ್​ ಇಂಡಿಯಾ ಕೋಚ್​ ಆಗಿ ಗೌತಮ್​ ಗಂಭೀರ್​ ಫಿಕ್ಸ್​; ಅಧಿಕೃತ ಘೋಷಣೆಯಷ್ಟೇ ಬಾಕಿ

Gautam Shah
Published on

ನವದೆಹಲಿ: ಟೀಮ್​ ಇಂಡಿಯಾ ಲೆಜೆಂಡರಿ ಆಟಗಾರ ಗೌತಮ್ ಗಂಭೀರ್ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗೌತಮ್​ 2023ರವರೆಗೆ ಲಖನೌ ಸೂಪರ್‌ಜೈಂಟ್ಸ್‌ (ಎಲ್​ಎಸ್​ಜಿ) ತಂಡದ ಮೆಂಟರ್​ ಆಗಿದ್ದರು ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈ ಬಾರಿ ಅವರು ಕೋಲ್ಕತ್ತ ನೈಟ್ ರೈಡರ್ಸ್‌ (ಕೆಕೆಆರ್​) ತಂಡಕ್ಕೆ ಶಿಫ್ಟ್ ಆಗಿದ್ದಾರೆ. ಕೆಕೆಆರ್​ನ ಹೊಸ ಮೆಂಟರ್ ಆಗಿ ಬಂದ ಬಳಿಕ ತಂಡದ ಸಂಯೋಜನೆಯನ್ನೇ ಗೌತಿ ಬದಲಾಯಿಸುವ ಮೂಲಕ ತಂಡ ಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆಟಗಾರರಲ್ಲಿರುವ ಪ್ರತಿಭೆಯನ್ನು ಹೊರತಂದು ಅವರಿಗೆ ಬೇಕಾದ ಬೆಂಬಲ ನೀಡುವ ಮೂಲಕ ಗಂಭೀರ್ ಕೆಕೆಆರ್​ಗೆ ಹೊಸ ಹೀರೋ ಎನಿಸಿಕೊಂಡಿದ್ದಾರೆ. 17 ನೇ ಆವೃತ್ತಿಯಲ್ಲಿ ಕೆಕೆಆರ್​ ಕಪ್​ ಗೆದ್ದ ಬೆನ್ನಲ್ಲೇ ಅವರು ಟೀಮ್​ ಇಂಡಿಯಾ ಕೋಚ್​ ಆಗುತ್ತಾರೆ ಎಂಬ ವಿಚಾರ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡಲು ಶುರು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಕ್ರಿಕ್​ಬಜ್​ಗೆ ಪ್ರತಿಕ್ರಿಯಿಸಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಟೀಮ್​ ಇಂಡಿಯಾದ ಕೋಚ್​ ಹುದ್ದೆಗೆ ಗೌತಮ್​ ಗಂಭೀರ್​ ಹೆಸರು ಬಹುತೇಕ ಅಂತಿಮಗೊಂಡಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ. ಟಿ-20 ವಿಶ್ವಕಪ್​ ಬಳಿಕ ಎಲ್ಲದ್ದಕ್ಕೂ ಉತ್ತರ ಸಿಗಲಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ವೇಳೆ ಗೌತಮ್​ ಗಂಭೀರ್​ ಟೀಮ್​ ಇಂಡಿಯಾ ಕೋಚ್​ ಆಗಿ ಅಧಿಕಾರ ವಹಿಸಿಕೊಂಡರೆ ಅವರು ಕೆಕೆಆರ್​ ಮೆಂಟರ್​ ಸ್ಥಾನವನ್ನು ತ್ಯಜಿಸಬೇಕಾಗುತ್ತದೆ.

ಇತ್ತ ಗೌತಮ್​ ಗಂಭೀರ್​ ಅವರನ್ನು ಕೆಕೆಆರ್​ ಮೆಂಟರ್​ ಆಗಿ ಉಳಿಸಿಕೊಳ್ಳಲು ಶಾರುಖ್​ ಖಾನ್​ ಅವರು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದ್ದು, ಅವರಿಗೆ ಬ್ಲಾಂಕ್​ ಚೆಕ್​ ಆಫರ್​ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಫೈನಲ್​ ಮುಗಿದ ಬಳಿಕ ಈ ಬೆಳವಣಿಗೆಗಳು ನಡೆದಿದ್ದು, ಅಂತಿಮವಾಗಿ ಟಿ20 ವಿಶ್ವಕಪ್​ ಮುಗಿದ ಬಳಿಕ ಎಲ್ಲದಕ್ಕೂ ತೆರೆ ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net