ನಿಜಕ್ಕೂ ಧೋನಿ ಫೋನ್​ ಎತ್ತಿದ್ರಾ? ಬಿಸಿಸಿಐ ಭರ್ಜರಿ ಆಫರ್​ ಕುರಿತು ಮನೋಜ್​ ತಿವಾರಿ ಮಾತು | MS Dhoni

ವಿಜಯವಾಣಿ (40)
Published on

MS Dhoni: ಟೀಮ್ ಇಂಡಿಯಾಗೆ 2 ಐಸಿಸಿ ವಿಶ್ವಕಪ್ ಮತ್ತು ಒಂದು ಚಾಂಪಿಯನ್ಸ್ ಟ್ರೋಫಿಯನ್ನು ತಂದುಕೊಟ್ಟಿರುವ ಶ್ರೇಷ್ಠ ನಾಯಕ, ಮಾಜಿ ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್​ ಧೋನಿಗೆ ಇದೀಗ ಬಿಸಿಸಿಐ ಭಾರತ ತಂಡದ ಮೆಂಟರ್​ ಆಗುವಂತೆ ಭರ್ಜರಿ ಆಫರ್ ನೀಡಿದೆ ಎಂದು ಕ್ರಿಕೆಟ್​ ವರದಿಗಳು ತಿಳಿಸಿವೆ. ಆದರೆ, ಈ ಬಗ್ಗೆ ಧೋನಿ ಅವರ ಅಭಿಪ್ರಾಯವೇನು? ಬಿಸಿಸಿಐ ಕರೆಗೆ ಸ್ಪಂದಿಸಿ ಏನು ಹೇಳಿದ್ರು? ಎಂಬ ವಿಷಯ ಮಾತ್ರ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈ ವಿಚಾರ ಹೊರಬೀಳುತ್ತಿದ್ದಂತೆ, ಮತ್ತೊಮ್ಮೆ ‘ಕ್ಯಾಪ್ಟನ್ ಕೂಲ್’ ಟೀಮ್ ಇಂಡಿಯಾದ ಮೆಂಟರ್​ ಆಗ್ತಾರಾ ಎಂಬ ಕುತೂಹಲ ಸದ್ಯ ಕ್ರಿಕೆಟ್​ ಪ್ರಿಯರಲ್ಲಿ ಮೂಡಿದೆ.

ಮನೋಜ್​ ತಿವಾರಿ ಅಚ್ಚರಿ!

ಇನ್ನು ಧೋನಿ ಅವರನ್ನು ಮೆಂಟರ್​ ಆಗಿ ನೇಮಕ ಮಾಡಿಕೊಳ್ಳಲು ಬಿಸಿಸಿಐ ಆಫರ್ ನೀಡಿರುವ ಬಗ್ಗೆ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಪ್ರತಿಕ್ರಿಯಿಸಿದ್ದು, "ನಿಜಕ್ಕೂ ಮಾಹಿ ಫೋನ್ ಎತ್ತಿದ್ರಾ? ಏಕೆಂದರೆ, ಅವರನ್ನು ಫೋನ್‌ ಕಾಲ್​ ಅಥವಾ ಮೆಸೇಜ್​ ಮೂಲಕ ಸಂಪರ್ಕಿಸುವುದು ಬಹಳ ಕಷ್ಟ. ಮೊದಲನೆಯದು, ಧೋನಿ ಆ ಜವಾಬ್ದಾರಿಯನ್ನು ಸ್ವೀಕರಿಸುತ್ತಾರೋ ಅಥವಾ ಇಲ್ಲವೋ ಎಂಬುದು ಮುಖ್ಯ. ಒಬ್ಬ ಕ್ಯಾಪ್ಟನ್ ಮತ್ತು ಆಟಗಾರನಾಗಿ ಅವರ ಅನುಭವ ಅಪಾರ. ಇದು ಭಾರತ ತಂಡಕ್ಕೆ ತುಂಬಾ ಉಪಯುಕ್ತವಾಗಲಿದೆ ಎಂಬುದರಲ್ಲಿ ಅನುಮಾನವಿಲ್ಲ" ಎಂದಿದ್ದಾರೆ.

ಧೋನಿ-ಗಂಭೀರ್ ಜೋಡಿ

"ಇಂದು ಹೊರಹೊಮ್ಮುತ್ತಿರುವ ಮತ್ತು ಭಾರತೀಯ ತಂಡದ ಸ್ಟಾರ್​ ಕ್ರಿಕೆಟಿಗರಾಗಿ ಮೈದಾನದಲ್ಲಿ ಮಿಂಚುವ ಹೊಸ ಆಟಗಾರರಿಗೆ ಧೋನಿ ಅವರಿಂದ ಹೆಚ್ಚಿನ ಬೆಂಬಲ ಹಾಗೂ ಕಲಿಕೆ ಸಿಗುತ್ತದೆ. ಇದರೊಟ್ಟಿಗೆ ಹೆಡ್​ ಕೋಚ್​ ಗೌತಮ್ ಗಂಭೀರ್ ಮತ್ತು ಮಾಹಿ ಅವರ ಜೋಡಿಯನ್ನು ಒಟ್ಟಿಗೆ ನೋಡುವ ಅವಕಾಶ ಕೂಡ ಸಿಗುತ್ತದೆ" ಎಂದು ಮನೋಜ್​ ತಿವಾರಿ ಅಭಿಪ್ರಾಯಿಸಿದ್ದಾರೆ. ಅಷ್ಟಕ್ಕೂ ಬಿಸಿಸಿಐ ನೀಡಿರುವ ಮೆಂಟರ್​ ಹುದ್ದೆಗೆ ಧೋನಿ ಒಪ್ಪಿಕೊಳ್ಳುತ್ತಾರಾ? ಇದನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಐಪಿಎಲ್​ಗೆ ಗುಡ್​ಬೈ ಹೇಳ್ತಾರಾ? ಎಂಬ ಹಲವು ಪ್ರಶ್ನೆಗಳು ಸದ್ಯ ಕ್ರಿಕೆಟ್​ ವಲಯದಲ್ಲಿ ಚರ್ಚೆಯಾಗುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net