

ಚೆನ್ನೈ: ಮಾರ್ಚ್ 22ರಂದು ಅದ್ದೂರಿ ಚಾಲನೆ ಮೂಲಕ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಯು ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಮನರಂಜನೆಯ ಭರವಸೆ ಮೂಡಿಸಿದ್ದು, ಮೊದಲ ಪಂದ್ಯದಲ್ಲೇ ಮುಖಾಮುಖಿಯಾದ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಭರ್ಜರಿ ಪೈಪೋಟಿ ನಡೆಸಿತು. ಅಂತಿಮವಾಗಿ ಎಂದಿನಂತೆ ಟೂರ್ನಿಯಲ್ಲಿ ಗೆಲುವಿನ ಮುಖೇನ ಶುಭಾರಂಭ ಮಾಡಿದ್ದು, ಧೋನಿ ಪಡೆ.
ಕಳೆದ 16 ಸೀಸನ್ಗಳಲ್ಲಿ 14 ಬಾರಿ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ, ಈ ಬಾರಿ ತಮ್ಮ ನಾಯಕತ್ವದಿಂದ ಹೊರಗುಳಿದು, ಯುವ ಆಟಗಾರರಿಗೆ ಅವಕಾಶ ಕಲ್ಪಿಸಿಕೊಟ್ಟರು. ಸಿಎಸ್ಕೆ ತಂಡಕ್ಕೆ ಓಪನರ್ ಆಗಿ ಕಣಕ್ಕಿಳಿಯುವ ರುತುರಾಜ್ ಗಾಯಕ್ವಾಡ್ಗೆ ಚೆನ್ನೈ ತಂಡದ ಕ್ಯಾಪ್ಟನ್ಸಿಯನ್ನು ಹಸ್ತಾಂತರಿಸಲಾಯಿತು.
ಇಷ್ಟು ಸೀಸನ್ಗಳಲ್ಲಿ ಸಿಎಸ್ಕೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಧೋನಿ ಕ್ಯಾಪ್ಟನ್ಸಿ ಇನ್ನುಂದೆ ಕಾಣಿಸುವುದಿಲ್ಲ ಎಂಬ ಸಂಗತಿ ಅವರ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಭಾರೀ ನೋವುಂಟು ಮಾಡಿತು. ಆರ್ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ರುತುರಾಜ್ ಕ್ಯಾಪ್ಟನ್ ಆಗಿ ಸಿಎಸ್ಕೆ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿ, ಗೆಲುವಿನೆಡೆಗೆ ಕೊಂಡೊಯ್ದರು. ಇದು ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ತಂದರೂ, ಧೋನಿ ನಾಯಕತ್ವ ಇರದಿರುವುದು ಬೇಸರ ಮೂಡಿಸಿತ್ತು.
ಆದರೆ, ಆರ್ಸಿಬಿ ವಿರುದ್ಧ ಮೊದಲ ಪಂದ್ಯದಲ್ಲಿ ಕಂಡುಬಂದ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಸಿಎಸ್ಕೆ ಅಭಿಮಾನಿಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಕ್ಯಾಪ್ಟನ್ ಆಗಿ ಗ್ರೌಂಡ್ನಲ್ಲಿ ರುತುರಾಜ್ ಕಾಣಿಸಿಕೊಂಡರು, ಫೀಲ್ಡಿಂಗ್ ಸೆಟ್ ಮಾಡಿದ್ದು ಧೋನಿ! ಈ ದೃಶ್ಯ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ಕಮೆಂಟ್ ಮಾಡಿದ ಫ್ಯಾನ್ಸ್, ಅಸಲಿಗೆ ನಾಯಕ ಯಾರು? ನಮ್ಮ ಕ್ಯಾಪ್ಟನ್ ಮಾಹಿಯೇ ಎಂದೆಲ್ಲಾ ಅಭಿಪ್ರಾಯಿಸಿದ್ದಾರೆ.
ಈ ವೀಡಿಯೋವನ್ನು ನೋಡಿದ ಸಿಎಸ್ಕೆ ಅಭಿಮಾನಿಗಳು ಕಳೆದ ವರ್ಷದಂತೆಯೇ ಈ ಸೀಸನ್ನಲ್ಲಿ ಕೂಡ ಮಧ್ಯಂತರ ಪಂದ್ಯಗಳಿಂದ ಧೋನಿ ನಾಯಕತ್ವದ ಜವಾಬ್ದಾರಿ ಸ್ವೀಕರಿಸಬಹುದು ಎಂದು ಊಹಿಸಿದ್ದಾರೆ. ಆದ್ರೆ, ಇದು ಎಷ್ಟರ ಮಟ್ಟಿಗೆ ನಿಜವಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್),.