

ನವದೆಹಲಿ: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಶುರುವಾಗುವುದಕ್ಕೆ ಒಂದು ತಿಂಗಳು ಮಾತ್ರ ಉಳಿದಿದ್ದು, ತಂಡಗಳು ಈಗಾಗಲೇ ಭರದಿಂದ ಸಿದ್ಧತೆ ನಡೆಸುತ್ತಿವೆ. 2024ರ ನವೆಂಬರ್ ಅಂತ್ಯದಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಹುಲ್, ಫಾಫ್ ಡು ಪ್ಲೆಸಿಸ್ ಸೇರಿದಂತೆ ಒಳ್ಳೆಯ ಆಟಗಾರರನ್ನು ಖರೀದಿಸುವ ಮೂಲಕ ಬಲಿಷ್ಠ ತಂಡವನ್ನು ಕಟ್ಟಿದ್ದು, ಈ ಬಾರಿ ಕಪ್ ಗೆಲ್ಲುವ ಮುನ್ಸೂಚನೆಯನ್ನು ನೀಡಿದೆ.
ಇನ್ನೂ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿದ್ದ ರಿಷಭ್ ಪಂತ್ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ಜೈಂಟ್ಸ್ ಪಾಲಾಗಿದ್ದು, ರಿಷಬ್ ಎಲ್ಎಸ್ಜಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಅಕ್ಷರ್ ಪಟೇಲ್ ನೇಮಕಗೊಂಡಿದ್ದು, ಇದೀಗ ತಂಡವು ಆರ್ಸಿಬಿಯ (RCB) ಮಾಜಿ ಆಟಗಾರನನ್ನು ಮೆಂಟರ್ಅನ್ನು ನೇಮಿಸಿದೆ.
ದಶಕಗಳ ಹಿಂದೆ ದಿಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದ ಇಂಗ್ಲೆಂಡ್ ಕ್ರಿಕೆಟ್ ದಂತಕತೆ ಕೆವಿನ್ ಪೀಟರ್ಸನ್ ಅವರು ಇದೀಗ ತಂಡದ ಮೆಂಟರ್ ಆಗಿ ಹಿಂದುರುಗಿದ್ದಾರೆ. ಕ್ರೀಡೆಯಿಂದ ನಿವೃತ್ತಿಯಾದ ಬಳಿಕ ಐಪಿಎಲ್ ನಲ್ಲಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಈ ಬಾರಿಯ ಆವೃತ್ತಿಯಿಂದ ಹೊಸ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಈ ಬಗ್ಗೆ ಫ್ರಾಂಚೈಸಿಯು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರಕಟಿಸಿದ್ದು, ದಿಲ್ಲಿ ಮತ್ತು ಕೆಪಿಯ ಪ್ರೀತಿ ಮುಂದುವರಿಯಲಿದೆ ಎಂದು ಬರೆದುಕೊಂಡಿದೆ. 2012ರಲ್ಲಿ ತಂಡಕ್ಕೆ ಸ್ವಾಗತಿಸಿದ್ದ ಪೋಸ್ಟ್ ಅನ್ನು ರೀಪೋಸ್ಟ್ ಮಾಡಿ ವೆಲ್ಕಮ್ ಬ್ಯಾಕ್ ಎಂದು ಸಂತಸ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಕೆಪಿ ಮನೆಗೆ ಮರಳಿದ್ದಾರೆ ಎಂದು ಜಗತ್ತಿಗೇ ಹೇಳಿ ಎಂದು ಮತ್ತೊಂದು ಪೋಸ್ಟ್ನಲ್ಲಿ ತಿಳಿಸಿದೆ.
ಇದು ಐಪಿಎಲ್‌ನಲ್ಲಿ ಕೆವಿನ್ ಪೀಟರ್ಸನ್ ಅವರ ಮೊದಲ ಕೋಚ್ ಪಾತ್ರವಾಗಲಿದೆ . ಅವರು ಕೊನೆಯ ಬಾರಿಗೆ ಈ ಲೀಗ್‌ನಲ್ಲಿ ಆಟಗಾರನಾಗಿ ಆಡಿದ್ದು 2016 ರಲ್ಲಿ. ಅವರು ಆರ್ಸಿಬಿಯಿಂದ (RCB) ವೃತ್ತಿ ಜೀವನ ಆರಂಭಿಸಿ, ನಂತರ ಸನ್ರೈಸರ್ಸ್ ಹೈದರಾಬಾದ್, ಡೆಲ್ಲಿ ಡೇರ್ ಡೇವಿಲ್ಸ್, ರೈಸಿಂಗ್ ಪುಣೆ ವಾರಿಯರ್ಸ್ ತಂಡಗಳ ಪರ ಆಡಿದ್ದರು.