

ಮುಂಬೈ: ಇಲ್ಲಿನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ಮುಂಬೈ ಹಾಗೂ ಜಮ್ಮು-ಕಾಶ್ಮೀರ ನಡುವಿನ ರಣಜಿ ಟ್ರೋಫಿ ಪಂದ್ಯದಲ್ಲಿ ಆತಿಥೇಯರಿಗೆ ಪ್ರವಾಸಿ ತಂಡವು 5 ವಿಕೆಟ್ಗಳ ಸೋಲುಣಿಸಿದ್ದು, ಹಾಲಿ ಚಾಂಪಿಯನ್ಸ್ಗೆ ಭಾರೀ ಮುಖಭಂಗವನ್ನುಂಟು ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡಕ್ಕೆ ಜಮ್ಮು-ಕಾಶ್ಮೀರದ ಬೌಲರ್ಗಳು ಆಘಾತ ನೀಡುವಲ್ಲಿ ಯಶಸ್ವಿಯಾದರು. ಮೊದಲ ಇನ್ನಿಂಗ್ಸ್ನಲ್ಲಿ 12 ರನ್ಗಳಿಸುವ ವೇಳೆಗೆ ರೋಹಿತ್ ಶರ್ಮ, ಯಶಸ್ವಿ ಜೈಸ್ವಾಲ್, ಶಿವಂ ದುಬೆ ಅವರನ್ನು ವಿಕೆಟ್ಅನ್ನು ಎದುರಾಳಿ ತಂಡದವರು ಕಬಳಿಸಿದರು. ಶಾರ್ದೂಲ್ ಠಾಕೂರ್ (51 ರನ್, 57 ಎಸೆತ, 5 ಬೌಂಡರಿ, 2 ಸಿಕ್ಸರ್) ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 120 ರನ್ಗಳಿಗೆ ಆಲೌಟ್ ಆಯಿತು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಜಮ್ಮು-ಕಾಶ್ಮೀರದ ಪರ ಆರಂಭಿಕ ಶುಭಂ ಖಜುರಿಯಾ (53 ರನ್, 75 ಎಸೆತ, 4 ಬೌಂಡರಿ, 3 ಸಿಕ್ಸರ್) ಮಧ್ಯಮ ಕ್ರಮಾಂಕದ ಬ್ಯಾಟರ್ ಅಬಿದ್ ಮುಷ್ತಾಕ್ (44 ರನ್, 37 ಎಸೆತ, 6 ಬೌಂಡರಿ, 2 ಸಿಕ್ಸರ್) ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 206 ರನ್ಗಳಿಗೆ ಆಲೌಟ್ ಆಯಿತು.
86 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಮುಂಬೈ ತಂಡಕ್ಕೆ ಮತ್ತೊಮ್ಮೆ ಜಮ್ಮು-ಕಾಶ್ಮೀರದ ಬೌಲರ್ಗಳು ಮತ್ತೊಮ್ಮೆ ಆಘಾತ ನೀಡುವಲ್ಲಿ ಯಶಸ್ವಿಯಾದರು. ಶಾರ್ದೂಲ್ ಠಾಕೂರ್ (119 ರನ್, 135 ಎಸೆತ, 18 ಬೌಂಡರಿ) ತನುಷ್ ಕೋಟ್ಯಾನ್ (62 ರನ್, 136 ಎಸೆತ, 6 ಬೌಂಡರಿ) ನೆರವಿನಿಂದಾಗಿ 290 ರನ್ಗಳಿಗೆ ಆಲೌಟ್ ಆಗುವ ಮೂಲಕ ಎದುರಾಳಿಗಳಿಗೆ 207 ರನ್ಗಳ ಗುರಿಯನ್ನು ಮುಂಬೈ ತಂಡ ನೀಡಿತು.
207 ರನ್ಗಳ ಗುರಿ ಪಡೆದ ಜಮ್ಮು-ಕಾಶ್ಮೀರ ತಂಡವು 5 ವಿಕೆಟ್ಗಳು ಭರ್ಜರಿ ಜಯ ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿತು. ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ವಿರುದ್ಧ ಜಮ್ಮು ಕಾಶ್ಮೀರಕ್ಕೆ ಇದು ಮೊದಲ ಗೆಲುವು ಎಂಬುದು ವಿಶೇಷ. ತಮ್ಮ ಫಾರ್ಮ್ ನಿರೂಪಿಸಲು 10 ವರ್ಷಗಳ ಬಳಿಕ ರಣಜಿಯಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ಮತ್ತೊಮ್ಮೆ ಮುಖಭಂಗವನ್ನು ಅನುಭವಿಸಿದರು.