ವೇಗಿ ಬುಮ್ರಾ ಔಟ್​; ಬದಲಿ ಸ್ಥಾನಕ್ಕೆ ಯಾರು ಬೆಸ್ಟ್?

Shami and Chahar
Published on

ನವ ದೆಹಲಿ: ಇಂಜುರಿ ಸಮಸ್ಯೆಯಿಂದ ಭಾರತ ತಂಡದ ಪ್ರಮುಖ ವೇಗಿ ಜಸ್​ಪ್ರೀತ್​ ಬುಮ್ರಾ ಹೊರಬೀಳುತ್ತಿದ್ದಂತೆ ಅವರ ಸ್ಥಾನ ಯಾರು ತುಂಬಲಿದ್ದಾರೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಏಷ್ಯಾಕಪ್ ಹಾಗೂ ತವರಿನಲ್ಲಿ ನಡೆದ ಏಷ್ಯಾಕಪ್ ಸರಣಿಯಲ್ಲಿ ಭಾರತದ ಬೌಲರ್​ಗಳಿಗೆ ಡೆತ್ ಓವರ್​ನಲ್ಲಿ ರನ್ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಬುಮ್ರಾ ಆಗಮನ ತಂಡಕ್ಕೆ ಕೊಂಚ ಸಮಾಧಾನ ತಂದಿತ್ತು. ಇದೀಗ ಬುಮ್ರಾ ಇಂಜುರಿಯಿಂದ ಹೊರನಡೆಯುತ್ತಿದ್ದಂತೆ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂದು ಆಯ್ಕೆ ಸಮಿತಿ ಲೆಕ್ಕಾಚಾರ ಹಾಕುತ್ತಿದೆ.

ಮೊಹಮ್ಮದ್ ಶಮಿ
ಬಿಸಿಸಿಐ ಮುಂದಿರುವ ಮೊದಲ ಆಯ್ಕೆ ಹಿರಿಯ ವೇಗೆ ಮೊಹಮ್ಮದ್ ಶಮಿ. ವಿಶ್ವಕಪ್​ಗೆ ತಂಡ ಪ್ರಕಟವಾಗುತ್ತಿದ್ದಂತೆ ಶಮಿ ಹೆಸರು ಮೀಸಲು ಬೌಲರ್​ ಪಟ್ಟಿಯಲ್ಲಿತ್ತು. ಹೀಗಾಗಿ ಆಯ್ಕೆ ಸಮಿತಿ ಟೀಕೆಗೂ ಗುರಿಯಾಗಿತ್ತು. ನಂತರ ಶಮಿ ಹೆಸರನ್ನು ತವರಿನ ಸೌತ್ ಆಫ್ರಿಕಾ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಕೋವಿಡ್ ಸೋಂಕಿನ ಕಾರಣದಿಂದ ಅವಕಾಶ ತಪ್ಪಿಸಿಕೊಂಡಿದ್ದರು.

ಶಮಿ ಕೋವಿಡ್​ನಿಂದ ಗುಣ ಮುಖರಾಗಿದ್ದಾರೆ. ಹೀಗಾಗಿ ಬುಮ್ರಾ ಸ್ಥಾನಕ್ಕೆ ಮೊದಲ ಆಯ್ಕೆಯಾಗಿ ಶಮಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ತಂಡದ ಬೌಲಿಂಗ್ ಲೈನ್​ಅಪ್ ನೋಡಿದರೆ ಶಮಿ ಅನುಭವ ಪ್ರಮುಖವಾಗುತ್ತದೆ. ಈವರೆಗೆ 17 ಟಿ-20 ಪಂದ್ಯ ಆಡಿದ್ದಾರೆ. 31.55 ಎಕಾನಮಿಯಲ್ಲಿ ಒಟ್ಟು 18 ವಿಕೆಟ್ ಕಬಳಿಸಿದ್ದಾರೆ. 15 ರನ್ ನೀಡಿ 3 ವಿಕೆಟ್ ಕಬಳಿಸಿರುವುದು ಇದುವರೆಗಿನ ಶಮಿ ಬೆಸ್ಟ್ ಬೌಲಿಂಗ್.

ದೀಪಕ್ ಚಹರ್
ಐಪಿಎಲ್​ನಿಂದ ಬೆಳಕಿಗೆ ಬಂದ ಪ್ರತಿಭೆ ದೀಪಕ್ ಚಹರ್. ಭಾರತ ಟಿ-20 ತಂಡದಲ್ಲೂ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ್ದಾರೆ. ಸದ್ಯ ಭುವನೇಶ್ವರ್​ ಕುಮಾರ್ ಅನುಪಸ್ಥಿತಿಯಲ್ಲಿ ಗಮನಾರ್ಹವಾಗಿಯೇ ಬೌಲಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಬುಮ್ರಾ ಸ್ಥಾನಕ್ಕೆ ದೀಪಕ್ ಚಹರ್ ಹೆಚ್ಚು ಸೂಕ್ತ ಎನ್ನುವ ಮಾತು ಜೋರಾಗಿದೆ.

ದೀಪಕ್ ಚಹರ್ ಹೊಸ ಚೆಂಡಿನಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿ ಯಶಸ್ವಿಯಾಗಿದ್ದಾರೆ. ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪ್ರಮುಖ ವೇಗಿ. ಶಮಿಗೆ ಹೋಲಿಸಿದರೆ ಟಿ-20 ಕ್ರಿಕೆಟ್​​ನಲ್ಲಿ ದೀಪಕ್ ಚಹರ್ ಹೆಚ್ಚಿನ ಅನುಭವ ಹೊಂದಿದ್ದಾರೆ. ಜತೆಗೆ ಅಗತ್ಯ ಸಂದರ್ಭದಲ್ಲಿ ಬ್ಯಾಟಿಂಗ್​ಗೂ ನೆರವಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ದೀಪಕ್ ಚಹರ್ ಈವರೆಗೆ 22 ಟಿ-20 ಪಂದ್ಯಗಳನ್ನು ಆಡಿದ್ದಾರೆ. 8.08ರ ಎಕಾನಮಿಯಲ್ಲಿ 28 ವಿಕೆಟ್ ಕಬಳಿಸಿದ್ದಾರೆ. 2019ರಲ್ಲಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್ ಕಬಳಿಸಿರುವುದು ದೀಪಕ್​ ಚಹರ್​ ಬೆಸ್ಟ್ ಬೌಲಿಂಗ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net