ನಿನ್ನೆ ಪಂದ್ಯದಲ್ಲಿ ನೀವಿದನ್ನು ಗಮನಿಸಿದ್ರಾ? ಇದೆಲ್ಲಾ ಬರೀ ನಾಟಕ ಕಿಂಚಿತ್ತು ಬದಲಾಗಿಲ್ಲ ಸಂಜೀವ್​ ಗೋಯೆಂಕಾ! ​

KL Rahul
Published on

ನವದೆಹಲಿ: ಕೆಲವು ದಿನಗಳ ಹಿಂದೆ ಸನ್‌ರೈಸರ್ಸ್ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ (ಎಲ್​ಎಸ್​ಜಿ) ಅತಿ ಕೆಟ್ಟದಾಗಿ ಸೋತಿದ್ದು ಎಲ್ಲರಿಗೂ ತಿಳಿದೇ ಇದೆ. ಪಂದ್ಯ ಸೋತ ಬಳಿಕ ಎಲ್​ಎಸ್​ಜಿ ಮಾಲೀಕ ಸಂಜೀವ್ ಗೋಯೆಂಕಾ ಅವರು ನಾಯಕ ಕೆಎಲ್ ರಾಹುಲ್ ಅವರನ್ನು ಮೈದಾನದಲ್ಲೇ ನಿಂದಿಸಿದ್ದರು. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಜಿ ಆಟಗಾರರು ಮತ್ತು ನೆಟಿಗ್ಗರು ಗೋಯೆಂಕಾರನ್ನು ಟೀಕಿಸಿದ್ದರು. ನಿನ್ನೆ (ಮೇ 14) ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಲಖನೌ 19 ರನ್‌ಗಳಿಂದ ಸೋಲುಂಡಿತು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ (5) ಮತ್ತೊಮ್ಮೆ ನಿರಾಸೆ ಮೂಡಿಸಿದರು. ರಾಹುಲ್ ಔಟಾದಾಗ ಸಂಜೀವ್​ ಗೋಯೆಂಕಾ ನೀಡಿದ ಪ್ರತಿಕ್ರಿಯೆ ಈಗ ವೈರಲ್ ಆಗಿದ್ದು, ಮತ್ತೊಮ್ಮೆ ಟೀಕೆಗೆ ಗುರಿಯಾಗಿದೆ.

ಎಸ್​ಆರ್​ಎಚ್​ ವಿರುದ್ಧದ ಪಂದ್ಯದಲ್ಲಿ ಸೋತಾಗ ಗೋಯೆಂಕಾ ಅವರು ರಾಹುಲ್ ಅವರನ್ನು ನಿಂದಿಸಿದ್ದಕ್ಕೆ ಟೀಮ್​ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್​ ಮತ್ತು ರಾಹುಲ್​ ಪತ್ನಿ ಅಥಿಯಾ ಶೆಟ್ಟಿ ಕೂಡ ಗೋಯೆಂಕಾ ವಿರುದ್ಧ ಅಸಮಾಧಾನ ಹೊರಹಾಕಿದರು. ಮುಂದಿನ ವರ್ಷ ಆರ್​ಸಿಬಿಗೆ ಬಂದು ಬಿಡಿ ಎಂದು ರಾಹುಲ್​ಗೆ ಅಭಿಮಾನಿಗಳು ಆಹ್ವಾನಿಸಿದ್ದರು. ಗೋಯೆಂಕಾ ನಡೆ ಒಪ್ಪುವಂಥದ್ದಲ್ಲ ಓರ್ವ ಸ್ಟಾರ್​ ಆಟಗಾರನನ್ನು ಈ ರೀತಿ ನಿಂದಿಸುವುದು ಸರಿಯಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಹೊರಹಾಕಿದ್ದರು. ಸಾಕಷ್ಟು ಟೀಕೆಗಳ ನಡುವೆ ಗೋಯೆಂಕಾ ಅವರು ರಾಹುಲ್ ಅವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸುವ ಮೂಲಕ ಸಮಾಧಾನ ಮಾಡಿ, ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ನಿನ್ನೆ (ಮೇ 14) ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 5 ರನ್‌ಗಳಿಗೆ ಪೆವಿಲಿಯನ್ ತಲುಪುವ ಮೂಲಕ ರಾಹುಲ್ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರಿಸಿದ್ದಾರೆ. ಇಶಾಂತ್​ ಶರ್ಮ ಎಸೆದ ಮೊದಲ ಓವರ್‌ನಲ್ಲಿ ರಾಹುಲ್​ ಔಟಾದರು. ಬಳಿಕ ರಾಹುಲ್ ಡಗೌಟ್​ನತ್ತ ಬರುವಾಗ ಲಖನೌ ಮಾಲೀಕರು ನಗುತ್ತಿದ್ದರು. ಇದಕ್ಕೆ ಸಂಬಂಧಿಸಿದ ಚಿತ್ರಗಳು ವೈರಲ್ ಆಗಿದ್ದು, ಸ್ವಂತ ತಂಡದ ನಾಯಕ ಔಟಾದರೆ ಈ ನಗುವೇಕೆ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇನ್ನು ರಾಹುಲ್ ಮೇಲಿನ ಗೋಯೆಂಕಾ ಸಿಟ್ಟು ಇನ್ನೂ ಕಡಿಮೆಯಾಗಿಲ್ಲ. ಮನೆಗೆ ಕರೆದು ಸಮಾಧಾನ ಮಾಡುವುದೆಲ್ಲ ಬರೀ ನಾಟಕವಷ್ಟೇ, ಗೋಯೆಂಕಾ ನಡೆ ತುಂಬಾ ಅಪಾಯಕಾರಿ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಇನ್ನೂ ಪಂದ್ಯದ ವಿಷಯಕ್ಕೆ ಬಂದರೆ, ಮೊದಲು ಬ್ಯಾಟ್ ಮಾಡಿದ ಡೆಲ್ಲಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 208 ರನ್ ಗಳಿಸಿತು. ಅಭಿಷೇಕ್ ಪೊರೆಲ್ (58) ಮತ್ತು ಟ್ರಿಸ್ಟಾನ್ ಸ್ಟಬ್ಸ್ (57*) ಉತ್ತಮ ಇನ್ನಿಂಗ್ಸ್ ಆಡಿದರು. ಇವರೊಂದಿಗೆ ಶೈ ಹೋಪ್ (38) ಮತ್ತು ನಾಯಕ ಪಂತ್ (33) ರನ್ ಗಳಿಸಿ ಮಿಂಚಿದರು. ಬಳಿಕ 209 ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಇಳಿದ ಲಖನೌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 189 ರನ್ ಗಳಿಸಿ 19 ರನ್‌ಗಳಿಂದ ಸೋಲನ್ನು ಅನುಭವಿಸಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net