ನಾಯಕತ್ವ ವಹಿಸಿಕೊಂಡ್ರೆ ಸಾಲದು… ಹಾರ್ದಿಕ್​ಗೆ ಮುಖಕ್ಕೆ ಹೊಡದಂಗೆ ಹೇಳಿದ್ರು ಮಾಜಿ ಸ್ಟಾರ್​ ಕ್ರಿಕೆಟಿಗ

WhatsApp Image 2024-04-23 at 3.32.29 PM
Published on

ಜೈಪುರ: ನಿನ್ನೆ (ಏಪ್ರಿಲ್​ 22) ಇಲ್ಲಿನ ಸವಾಯಿ ಮಾನ್ಸಿಂಗ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಹೀನಾಯ ಸೋಲನ್ನು ಅನುಭವಿಸಿತು. ಆಡಿದ 8 ಪಂದ್ಯಗಳಲ್ಲಿ ಕೇವಲ ಮೂರು ಮ್ಯಾಚ್​​ಗಳನ್ನು ಗೆದ್ದಿರುವ ಎಂಐಗೆ ಇದು ಐದನೇ ಸೋಲಾಗಿದೆ. ಐಪಿಎಲ್ ಆರಂಭಕ್ಕೂ ಮುನ್ನ ರೋಹಿತ್​ ಶರ್ಮಾರಿಂದ ಕ್ಯಾಪ್ಟನ್ಸಿ ವಹಿಸಿಕೊಂಡ ಹಾರ್ದಿಕ್​ಗೆ ಈಗ ಭಾರೀ ಮುಖಭಂಗ ಎದುರಾಗಿದೆ.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡು 20 ಓವರ್​ಗಳಲ್ಲಿ  9 ವಿಕೆಟ್ ನಷ್ಟಕ್ಕೆ ಕೇವಲ 179 ರನ್​ಗಳನ್ನು ಕಲೆಹಾಕುವಲ್ಲಿ ಶಕ್ತವಾಯಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ಪಡೆಗೆ ಆರಂಭಿಕ ಹಂತದಲ್ಲೇ ಜಾಸ್​ ಬಟ್ಲರ್​ ವಿಕೆಟ್ ಕಳೆದುಕೊಂಡಿದ್ದು ಬಿಟ್ಟರೆ ಇನ್ಯಾವ ವಿಕೆಟ್ ಕಳೆದುಕೊಳ್ಳದೆ, ಅತ್ಯಂತ ‘ಯಶಸ್ವಿ’ಯಾಗಿ 8 ಬಾಲ್​ಗಳಿಗೂ ಮುನ್ನವೇ ಪಂದ್ಯವನ್ನು ಮುಗಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್​ ಬ್ಯಾಟ್ಸ್​ಮನ್​ಗಳು ನಿರೀಕ್ಷಿಸಿದಂತೆ ಅಬ್ಬರಿಸಲಿಲ್ಲ. ಬದಲಿಗೆ ಒಬ್ಬರಂತೆ ಒಬ್ಬರು ಪೆವಿಲಿಯನ್ ಹಾದಿ ಹಿಡಿದರು.

ಸತತವಾಗಿ ಹೀನಾಯವಾಗಿ ಸೋಲುತ್ತಿರುವ ಮುಂಬೈ ಇಂಡಿಯನ್ಸ್​ ತಂಡವನ್ನು ಗೆಲುವಿನ ಹಾದಿಗೆ ತರಲು ಕ್ಯಾಪ್ಟನ್ ಹಾರ್ದಿಕ್ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದ್ಯಾವುದು ಫಲಿಸುತ್ತಿಲ್ಲ. ಕಳೆದ ಸೀಸನ್​​ಗಳಲ್ಲಿ ಹಿಟ್ ಮ್ಯಾನ್​ ಕ್ಯಾಪ್ಟನ್ಸಿಯಲ್ಲಿ ತಂಡ ಎದುರಾಳಿಗೆ ಭಾರೀ ಪೈಪೋಟಿ ಕೊಡುವ ಮೂಲಕ ಲೀಗ್​ನ ಟಾಪ್ ನಾಲ್ಕರೊಳಗೆ ಇರುತ್ತಿತ್ತು. ಆದ್ರೆ, ಈ ಬಾರಿಯ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ಮೂಲಕ ಎಂಐ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಅಲಂಕರಿಸಿದೆ. ಟೀಮ್​ನ ನೂತನ ನಾಯಕರಾಗಿ ನೇಮಕವಾದಾಗಿನಿಂದ ಪಾಂಡ್ಯಗೆ ಭಾರೀ ಹಿನ್ನಡೆಯಾಗುತ್ತಿದೆ.

ಇದೆಲ್ಲವೂ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಅತೀವ ಬೇಸರ ತಂದಿದ್ದು, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮೇಲಿರುವ ಅಸಮಾಧಾನವನ್ನು ಶಮನಗೊಳಿಸಲು ಬಿಡುತ್ತಿಲ್ಲ. ಇನ್ನು ನಿನ್ನೆ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯ ಸೋತ ಬೆನ್ನಲ್ಲೇ ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್​ ಬೌಲರ್​ ಆದ ಡೇಲ್ ಸ್ಟೇನ್ ಟ್ವೀಟ್ ಮೂಲಕ ಹಾರ್ದಿಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಆಟಗಾರರು ಯಾವಾಗ ಪ್ರಾಮಾಣಿಕವಾಗಿ ತಮ್ಮ ತಲೆಯಲ್ಲಿರುವುದನ್ನು ಹೇಳುತ್ತಾರೆ ಎಂದು ನಾನು ಕಾತರದಿಂದ ಎದುರು ನೋಡ್ತದ್ದೀನಿ. ಎಂದಿನಂತೆ ಹೇಳುವಂತೆ ಈ ಪಂದ್ಯವನ್ನು ಇಂದು ಕಳೆದುಕೊಂಡಿದ್ದೇವೆ ಎಂದು ಮುಗುಳ್ನಕ್ಕಿ ಮುಂದಿನ ಪಂದ್ಯಗಳಲ್ಲಿ ಗೆಲ್ಲೋಣ ಎಂದು ಮತ್ತೆ ಅದೇ ನಾನ್​ಸೆನ್ಸ್​​ನ ರಿಪೀಟ್ ಮಾಡೋದಲ್ಲ" ಎಂದು ಡೈಲ್​ ಸ್ಟೈನ್ ನೇರವಾಗಿ ಅರ್ಥವಾಗುವಂತೆ​ ಹೇಳಿದ್ದಾರೆ. ಇನ್ನು ಎಂಐ ಫ್ಯಾನ್ಸ್ ಕೂಡ ಭಾರೀ ಅಸಮಾಧಾನ ಹೊರಹಾಕಿದ್ದು, ನಾಯಕತ್ವ ವಹಿಸಿಕೊಂಡ್ರೆ ಸಾಲದು, ತಂಡವನ್ನು ಯಶಸ್ಸಿನತ್ತ ಮುನ್ನಡೆಸಬೇಕು ಎಂದೆಲ್ಲಾ ಕಮೆಂಟ್ ಮಾಡಿ, ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net