ಸ್ಟಾರ್ ಕ್ರಿಕೆಟಿಗರಿಗೂ ಹರಡಿದ ಕರೊನಾ ವೈರಸ್!

cricket corona
Published on

ನವದೆಹಲಿ: ಕ್ರಿಕೆಟ್ ಚಟುವಟಿಕೆ ಪುನರಾರಂಭ ಮಾಡಲು ಸಿದ್ಧತೆಗಳು ನಡೆಯುತ್ತಿರುವ ನಡುವೆ ವಿಶ್ವದೆಲ್ಲೆಡೆ ಕೆಲವು ಸ್ಟಾರ್ ಕ್ರಿಕೆಟಿಗರೇ ಕರೊನಾ ಸೋಂಕಿಗೆ ಒಳಗಾಗುತ್ತಿರುವುದು ಆತಂಕ ಮೂಡಿಸಿದೆ. ಕಳೆದ ವಾರವಷ್ಟೇ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ ಕರೊನಾ ಪಾಸಿಟಿವ್ ವರದಿ ಬಂದಿತ್ತು. ಶನಿವಾರ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಫೆ ಮೊರ್ಟಜಗೂ ಕರೊನಾ ಸೋಂಕು ದೃಢಪಟ್ಟಿದೆ. ಬಾಂಗ್ಲಾದೇಶ ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಅವರ ಅಣ್ಣ ನಫೀಸ್ ಇಕ್ಬಾಲ್‌ಗೂ ಕರೊನಾ ಪಾಸಿಟಿವ್ ಬಂದಿದೆ. ಇದರ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬದಲ್ಲೂ ಕರೊನಾ ಆತಂಕ ಮೂಡಿಸಿದೆ.

ಸಂಸದರೂ ಆಗಿರುವ 35 ವರ್ಷದ ವೇಗಿ ಮೊರ್ಟಜ ಕಳೆದ ಕೆಲ ಸಮಯದಿಂದ ಕರೊನಾ ಹಾವಳಿಯಿಂದಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಕೆಲಸದಲ್ಲಿ ನಿರತರಾಗಿದ್ದರು. ಆದರೆ ಅವರಿಗೆ ಸೋಂಕು ಹೇಗೆ ಹರಡಿದೆ ಎಂಬುದು ಸ್ಪಷ್ಟವಾಗಿಲ್ಲ. ಮೊರ್ಟಜ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಶುಕ್ರವಾರ ಪರೀಕ್ಷೆ ನಡೆದಿತ್ತು. ಶನಿವಾರ ವರದಿ ಬಂದಿದೆ. ಢಾಕಾದ ಮನೆಯಲ್ಲಿ ಐಸೋಲೇಷನ್‌ನಲ್ಲಿರಲಿದ್ದಾರೆ ಎಂದು ಮೊರ್ಟಜ ಸಹೋದರ ಮೊರ್‌ಸಲಿನ್ ಬಿನ್ ಮೊರ್ಟಜ ತಿಳಿಸಿದ್ದಾರೆ. ಬಾಂಗ್ಲಾದೇಶದ ಮತ್ತೋರ್ವ ಮಾಜಿ ಕ್ರಿಕೆಟಿಗ ನಫೀಸ್ ಇಕ್ಬಾಲ್‌ಗೂ ಶನಿವಾರ ಕರೊನಾ ಸೋಂಕು ದೃಢಪಟ್ಟಿದೆ. 34 ವರ್ಷದ ನಫೀಸ್ ಬಾಂಗ್ಲಾ ಪರ 11 ಟೆಸ್ಟ್ 16 ಏಕದಿನ ಆಡಿದ್ದಾರೆ. ಬಾಂಗ್ಲಾದಲ್ಲಿ ಕರೊನಾ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದ್ದು, ದೇಶದಲ್ಲಿ ಈಗ ಪ್ರದೇಶವಾರು ಲಾಕ್‌ಡೌನ್ ಜಾರಿಯಲ್ಲಿದೆ.

ಇದಕ್ಕೂ ಮುನ್ನ ಪಾಕಿಸ್ತಾನ ಮಾಜಿ ಕ್ರಿಕೆಟಿಗ ತೌಫೀಕ್ ಉಮರ್‌ಗೆ ಕರೊನಾ ದೃಢಪಟ್ಟಿದ್ದರೆ, ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗರಾದ ರಿಯಾಜ್ ಶೇಕ್ ಮತ್ತು ಜರ್ ರ್ಸ್ರಾಜ್ ಕರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಬಂಗಾಳದಲ್ಲಿ ಮಾಜಿ ರಣಜಿ ಕ್ರಿಕೆಟಿಗ ಸಗರ್‌ಮೋಯ್ ಸೇನ್‌ಶರ್ಮಗೂ ಕರೊನಾ ಸೋಂಕು ದೃಢಪಟ್ಟಿತ್ತು.

ಗಂಗೂಲಿ ಕುಟುಂಬದಲ್ಲೂ ಆತಂಕ
ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕುಟುಂಬದಲ್ಲಿ ಕರೊನಾ ಪ್ರಕರಣದ ದೃಢಪಟ್ಟಿದೆ. ಗಂಗೂಲಿ ಅವರ ಅಣ್ಣ ಹಾಗೂ ಮಾಜಿ ಕ್ರಿಕೆಟಿಗ ಸ್ನೇಹಾಶಿಶ್ ಗಂಗೂಲಿ ಅವರ ಪತ್ನಿಗೆ ಕರೊನಾ ಪಾಸಿಟಿವ್ ಬಂದಿದೆ. ಕಳೆದ ವಾರವಷ್ಟೇ ಸ್ನೇಹಾಶಿಶ್ ಅವರ ಅತ್ತೆ-ಮಾವ ಮತ್ತು ಓರ್ವ ಮನೆಕೆಲಸದವರಿಗೆ ಸೋಂಕು ದೃಢಪಟ್ಟಿತ್ತು. ಬಂಗಾಳ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿಯೂ ಆಗಿರುವ 55 ವರ್ಷದ ಸ್ನೇಹಾಶಿಶ್ ಅವರ ಕರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದರೂ, ಅವರಿಗೆ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net