

ಬೆಂಗಳೂರು: ಪ್ರತಿಯೊಬ್ಬರ ಜೀವನದ ಯಶಸ್ಸಿನಲ್ಲೂ ಗುರುಗಳ ಪಾತ್ರ ಪ್ರಮುಖವಾದುದು. ಕ್ರಿಕೆಟಿಗರ ಪಾಲಿಗೆ ಕೋಚ್ಗಳೇ ಗುರುಗಳು. ಕೋಚ್ ಸಮರ್ಥ ತರಬೇತಿ ನೀಡಿದರೆ ಕ್ರಿಕೆಟಿಗರು ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ ಮತ್ತು ಸ್ಟಾರ್ಗಳಾಗಿ ಬೆಳೆಯುತ್ತಾರೆ. ದಿಗ್ಗಜ ಬ್ಯಾಟ್ಸ್ಮನ್ ಸಚಿನ್ ತೆಂಡುಲ್ಕರ್ ಅವರ ವೃತ್ತಿಜೀವನದ ಯಶಸ್ಸಿನಲ್ಲಿ ಕೋಚ್ ರಮಾಕಾಂತ್ ಆಚ್ರೇಕರ್ ಪಾಲು ಅಮೋಘವಾದುದು. ಗುರುಪೂರ್ಣಿಮೆಯ ದಿನವಾದ ಭಾನುವಾರ ಕ್ರಿಕೆಟ್ ತಾರೆಯರು ತಮ್ಮ ಗುರುಗಳಿಗೆ ನಮಿಸಿದ್ದಾರೆ. ಈ ಮೂಲಕ ಶಿಷ್ಯರೂ ಸಾರ್ಥಕತೆ ಪಡೆದುಕೊಂಡಿದ್ದಾರೆ.
'ಗುರುಪೂರ್ಣಿಮೆಯ ದಿನದಂದು ನಾನು ನನಗೆ ಕಲಿಸಿದ ಮತ್ತು ನಾನು ಶ್ರೇಷ್ಠ ನಿರ್ವಹಣೆ ತೋರುವಂತೆ ಸ್ಫೂರ್ತಿ ತುಂಬಿದ ಎಲ್ಲರಿಗೂ ಧನ್ಯವಾದಗಳು' ಎಂದು ಸಚಿನ್ ತೆಂಡುಲ್ಕರ್ ಟ್ವೀಟಿಸಿದ್ದಾರೆ. ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರು, 'ಗುರುಪೂರ್ಣಿಮೆಯ ದಿನದಂದು ನಾನು ನನ್ನ ಎಲ್ಲ ಗುರುಗಳು, ಟೀಚರ್ಗಳು, ಮೆಟರ್ಗಳಿಗೆ ಧನ್ಯವಾದ ಹೇಳುತ್ತೇನೆ. ನಾನಿಂದು ಏನಾಗಿದ್ದೇನೋ ಅದೆಲ್ಲವೂ ಅವರಿಂದಲೇ ಆಗಿದ್ದು. ಅವರ ಬೆಂಬಲ, ಮಾರ್ಗದರ್ಶನಗಳಿಗೆ ಕೃತಜ್ಱನಾಗಿದ್ದೇನೆ. ಅವರಿಂದ ಕಲಿತ ಎಲ್ಲದಕ್ಕೂ ನ್ಯಾಯ ಸಲ್ಲಿಸಿರುವ ಭರವಸೆಯಲ್ಲಿದ್ದೇನೆ. ನನ್ನ ಜೀವನದ ಮೂಲಕ ಇತರರಿಗೂ ಸ್ಫೂರ್ತಿ ತುಂಬಲು ಪ್ರಯತ್ನಿಸುತ್ತೇನೆ. ಹ್ಯಾಪಿ ಗುರುಪೂರ್ಣಿಮಾ' ಎಂದು ಟ್ವೀಟಿಸಿದ್ದಾರೆ. ಮತ್ತೋರ್ವ ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಕೂಡ ಗುರುವಿಗೆ ನಮನ ಸಲ್ಲಿಸಿದ್ದಾರೆ.
ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರೂ ತಮ್ಮ ಗುರು ರಮಾಕಾಂತ್ ಆಚ್ರೆಕರ್ ಅವರನ್ನು ನೆನೆಸಿಕೊಂಡಿದ್ದು, 'ನಾನು ಆಚ್ರೆಕರ್ ಸರ್ ಅವರನ್ನು ಭೇಟಿಯಾಗುತ್ತಿದ್ದಾಗಲೆಲ್ಲಾ ಅವರ ಕಾಲಿಗೆ ನಮಿಸುತ್ತಿದ್ದೆ. ನನ್ನ ಪುತ್ರ ಕ್ರಿಶ್ಚಿಯಾನೋಗೂ ಅದನ್ನೇ ಕಲಿಸಿದ್ದೆ. ಅವರಿಂದ ಕಲಿತವುಗಳನ್ನು ಈಗಿನ ಯುವ ತಲೆಮಾರಿಗೆ ವರ್ಗಾಯಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ' ಎಂದು ಟ್ವೀಟಿಸಿದ್ದಾರೆ.
ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ವೃತ್ತಿಜೀವನಕ್ಕೆ ಹೊಸ ದಿಕ್ಕು ತೋರಿದ ನ್ಯೂಜಿಲೆಂಡ್ನ ಜಾನ್ ರೈಟ್ ಅವರಿಗೆ ನಮಿಸಿದ್ದಾರೆ. ಭಾನುವಾರ ಜಾನ್ ರೈಟ್ ಅವರ ಜನ್ಮದಿನವೂ ಆಗಿದ್ದು, ನನ್ನ ಜೀವನದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಕ್ಕೆ ಧನ್ಯವಾದಗಳು. ನನಗೆ ಕಲಿಸಿದ ಎಲ್ಲ ಟೀಚರ್ಗಳಿಗೂ ಧನ್ಯವಾದಗಳು ಎಂದು ಟ್ವೀಟಿಸಿದ್ದಾರೆ. ಮಾಜಿ ಬ್ಯಾಟ್ಸ್ಮನ್ ಮೊಹಮದ್ ಕೈಫ್ ಕೂಡ ಜಾನ್ ರೈಟ್ಗೆ ಜನ್ಮದಿನದ ಶುಭಾಶಯ ತಿಳಿಸುವ ಜತೆಗೆ ಗುರುಪೂರ್ಣಿಮೆಯ ನಮನವನ್ನೂ ಸಲ್ಲಿಸಿದ್ದಾರೆ.
ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಕೂಡ ಗುರುಪೂರ್ಣಿಮೆಯ ಹಿನ್ನೆಲೆಯಲ್ಲಿ ಕೋಚ್ ಟಿಎ ಶೇಕರ್ ಮತ್ತು ತಮ್ಮ ಕ್ರಿಕೆಟ್ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಎಲ್ಲ ತರಬೇತುದಾರರಿಗೆ ಧನ್ಯವಾದ ಹೇಳಿದ್ದಾರೆ.