

ಬೆಂಗಳೂರು: ಭಾರತೀಯ ಬ್ಯಾಡ್ಮಿಂಟನ್ನ ಸೆನ್ಸೇಶನಲ್ ತಾರೆ ಪಿವಿ ಸಿಂಧುಗೆ ಭಾನುವಾರ (ಜುಲೈ 5) 25ನೇ ಜನ್ಮದಿನದ ಸಂಭ್ರಮ. ಕಳೆದ ವರ್ಷ ವಿಶ್ವ ಚಾಂಪಿಯನ್ ಪಟ್ಟವೇರಿದ ಮೊದಲ ಭಾರತೀಯ ಷಟ್ಲರ್ ಎಂಬ ಸಾಧನೆ ಮಾಡಿದ್ದ ಪಿವಿ ಸಿಂಧು, ಒಲಿಂಪಿಕ್ಸ್ನಲ್ಲಿ ರಜತ ಪದಕ ಜಯಿಸಿದ ಮೊದಲ ಮಹಿಳೆಯೂ ಆಗಿದ್ದಾರೆ. ಕರೊನಾ ಹಾವಳಿಯಿಂದಾಗಿ ಕಳೆದ 3 ತಿಂಗಳಿನಿಂದ ಅಭ್ಯಾಸವನ್ನೂ ಮಾಡದ ಮನೆಯಲ್ಲೇ ಲಾಕ್ ಆಗಿರುವ ಪಿವಿ ಸಿಂಧುಗೆ ಕ್ರೀಡಾಲೋಕದ ತಾರೆಯರು ಮತ್ತು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಟ್ವಿಟರ್ನಲ್ಲಿ ಪಿವಿ ಸಿಂಧುಗೆ ಶುಭಾಶಯ ತಿಳಿಸಿದ್ದು, ಸಿಂಧು ಸಾಧನೆಯ ನೆನಪುಗಳನ್ನು ಹಂಚಿಕೊಳ್ಳುವಂತೆ ಅಭಿಮಾನಿಗಳಿಗೆ ಕೇಳಿಕೊಂಡಿದೆ. ಸಿಂಧು ಅವರ ಸಹ-ಷಟ್ಲರ್ ಆಗಿರುವ ಡಬಲ್ಸ್ ಆಟಗಾರ್ತಿ ಸಿಕ್ಕಿ ರೆಡ್ಡಿ, 'ನನ್ನ ಆಪ್ತ ಮತ್ತು ಹಳೆಯ ಗೆಳತಿಗೆ ಜನ್ಮದಿನದ ಶುಭಾಶಯಗಳು. ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುವೆ. ನಿನ್ನೊಂದಿಗೆ ಕಳೆದ ಉತ್ತಮ ದಿನಗಳ ನೆನಪು ಯಾವಾಗಲೂ ನನ್ನ ಮುಖದಲ್ಲಿ ನಗು ತರಿಸುತ್ತದೆ' ಎಂದು ಟ್ವೀಟಿಸಿದ್ದಾರೆ.
ಕ್ರೀಡಾ ಸಚಿವ ಕಿರಣ್ ರಿಜಿಜು ಅವರು, 'ಭಾರತದ ಮೊದಲ ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿಗ ಜನ್ಮದಿನದ ಶುಭಾಶಯಗಳು. ಭಾರತಕ್ಕೆ ಹೆಮ್ಮೆ ತರುವುದನ್ನು ಮುಂದುವರಿಸಿ' ಎಂದು ಟ್ವೀಟಿಸಿ ಶುಭಾಶಯ ಹೇಳಿದ್ದಾರೆ. ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಕೂಡ ಸಿಂಧು ಜತೆಗಿರುವ ವಿಡಿಯೋವನ್ನು ಟ್ವೀಟಿಸಿ ಶುಭಾಶಯ ತಿಳಿಸಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕೂಡ ಸಿಂಧುಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ.