More

    ಬದಲಾಗಲಿದೆ ಕ್ರಿಕೆಟ್!: ಕರೊನಾ ವೈರಸ್​ಭೀತಿಯಿಂದಾಗಿ ಹೊಸ ಹೊಸ ನಿಯಮಗಳು

    ಕರೊನಾ ವೈರಸ್ ಹಾವಳಿ ಶುರುವಾದ ಬಳಿಕ ಎಲ್ಲರ ಜೀವನಶೈಲಿಯೂ ಬದಲಾಗಿದೆ. ಮಾಸ್ಕ್, ಸ್ಯಾನಿಟೈಸರ್​ಗಳು ನಿತ್ಯ ಬಳಕೆಯ ವಸ್ತುಗಳಾಗಿದ್ದರೆ, ಸಾಮಾಜಿಕ ಅಂತರ ಪಾಲನೆ ಅಭ್ಯಾಸವಾಗಿ ಬಿಟ್ಟಿದೆ. ಇದೇ ರೀತಿ ಕರೊನಾ ಭೀತಿಯ ನಡುವೆ ಪುನರಾರಂಭಗೊಳ್ಳುತ್ತಿರುವ ಕ್ರೀಡೆಗಳೂ ಬದಲಾವಣೆ ಕಾಣುವುದು ಅಗತ್ಯವಾಗಿದೆ. ಇನ್ನು ಮೂರೇ ದಿನಗಳಲ್ಲಿ ಮತ್ತೆ ಆರಂಭಗೊಳ್ಳಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಆಟದಲ್ಲೂ ಇದೇ ರೀತಿಯ ಬದಲಾವಣೆಗಳನ್ನು ಕಾಣಲಿದ್ದೀರಿ. ಈ ಹಿಂದೆ ನೋಡಿದ್ದ ಕ್ರಿಕೆಟ್ ಪಂದ್ಯಗಳಿಗಿಂತ ಭಿನ್ನವಾದ ಅನುಭವಗಳಿಗೆ ಆಟಗಾರರು, ಕ್ರಿಕೆಟ್ ಪ್ರೇಮಿಗಳು ಒಗ್ಗಿಕೊಳ್ಳ ಬೇಕಾಗಿದೆ. ಹಾಗಾದರೆ ‘ನವವಾಸ್ತವ’ದ ಕ್ರಿಕೆಟ್ ಆಟ ಹೇಗಿರಲಿದೆ ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.

    ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ

    ಕರೊನಾ ಭೀತಿ ಶುರುವಾದ ಬಳಿಕ ಕ್ರೀಡಾ ಪ್ರೇಮಿಗಳಿಂದ ಕ್ರೀಡೆ ದೂರವಾಗಿದೆ. ಆಟವನ್ನು ಪ್ರತ್ಯಕ್ಷವಾಗಿ ನೋಡುವ ಬದಲಾಗಿ ಟಿವಿಯಲ್ಲಷ್ಟೇ ನೇರಪ್ರಸಾರ ನೋಡಬಹುದಾಗಿದೆ. ಈಗಾಗಲೆ ಫುಟ್​ಬಾಲ್, ರಗ್ಬಿ, ಬಾಸ್ಕೆಟ್​ಬಾಲ್, ಗಾಲ್ಪ್ ಕ್ರೀಡೆಗಳು ಪ್ರೇಕ್ಷಕರಿಲ್ಲದೆ ಶುರುವಾಗಿವೆ. ಕ್ರಿಕೆಟ್​ನಲ್ಲೂ ಇದೇ ಮುಂದುವರಿಯಲಿದೆ. ಜೈವಿಕ-ಸುರಕ್ಷಾ ವಾತಾವರಣ ನಿರ್ವಿುಸಲು ಇದು ಅನಿವಾರ್ಯವೂ ಆಗಿದೆ. ಮಾರ್ಚ್ 13ರಂದು ಕೊನೆಯದಾಗಿ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯಕ್ಕೂ ಪ್ರೇಕ್ಷಕರನ್ನು ನಿರ್ಬಂಧಿಸಲಾಗಿತ್ತು. ಜುಲೈ 8ರಿಂದ ನಡೆಯಲಿರುವ ಇಂಗ್ಲೆಂಡ್-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲೂ ಇದೇ ನಿಯಮ ಮುಂದುವರಿಯಲಿದೆ. ಖಾಲಿ ಕ್ರೀಡಾಂಗಣದಲ್ಲಿ ಬೌಂಡರಿ, ಸಿಕ್ಸರ್, ವಿಕೆಟ್ ಬಿದ್ದಾಗಲೂ ಹಷೋದ್ಗಾರ ಕೇಳಿಸುವುದಿಲ್ಲ. ಇನ್ನು ಸಿಕ್ಸರ್ ಸಿಡಿದ ಚೆಂಡು ಪ್ರೇಕ್ಷಕರ ಗ್ಯಾಲರಿಗೆ ಹೋಗಿ ಬಿದ್ದಾಗ ಅದನ್ನು ಹುಡುಕಲು ಆಟಗಾರರೇ ಪರದಾಡಿದ್ದನ್ನು ಈಗಾಗಲೆ ಆಸೀಸ್-ಕಿವೀಸ್ ಏಕದಿನದಲ್ಲಿ ನೋಡಿದ್ದೇವೆ. ಇದು ಮತ್ತೆ ಪುನರಾವರ್ತನೆಯಾಗಬಹುದು.

    ಕರೊನಾ ಲಕ್ಷಣವಿರುವ ಆಟಗಾರನಿಗೆ ಬದಲಿ!

    ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈಗಾಗಲೆ ಆಟಗಾರರ ತಲೆಗೆ ಪೆಟ್ಟು ಬಿದ್ದಾಗ ಕನ್​ಕಷನ್ (ಮೆದುಳು ಗಾಯ) ಬದಲಿ ನಿಯಮ ಜಾರಿಯಲ್ಲಿದೆ. ಇನ್ನು ಮುಂದೆ ಕರೊನಾ ಲಕ್ಷಣವಿರುವ ಆಟಗಾರರಿಗೂ ಬದಲಿ ಆಟಗಾರರನ್ನು ಪಡೆದುಕೊಳ್ಳಬಹುದು. ಕನ್​ಕಷನ್​ನಂತೆ ಇಲ್ಲೂ ರೆಫ್ರಿಯ ಅನುಮತಿ ಮೇರೆಗೆ ಬೌಲರ್​ಗೆ ಬೌಲರ್, ಬ್ಯಾಟ್ಸ್​ಮನ್​ಗೆ ಬ್ಯಾಟ್ಸ್ಮನ್, ಆಲ್ರೌಂಡರ್​ಗೆ ಆಲ್ರೌಂಡರ್​ರನ್ನು ಬದಲಿಗರಾಗಿ ಪಡೆದುಕೊಳ್ಳಬಹುದು. ಆದರೆ ಇದು ಟೆಸ್ಟ್​ಗೆ ಮಾತ್ರ ಅನ್ವಯ. ಟಿ20, ಏಕದಿನದಲ್ಲಿ ಈ ರೀತಿ ಬದಲಾವಣೆಗೆ ಅವಕಾಶವಿಲ್ಲ.

    ಚೆಂಡಿಗೆ ಎಂಜಲು ಹಚ್ಚಿದರೆ 5 ರನ್ ದಂಡ

    ಬಾಳೆಹಣ್ಣು ತಿನ್ನಲು ಕೊಟ್ಟಾಗ ಎಲ್ಲರೂ ಮೊದಲಿಗೆ ಸಿಪ್ಪೆ ಸುಲಿಯುವಂತೆ ಕ್ರಿಕೆಟಿಗರು, ಅದರಲ್ಲೂ ಬೌಲರ್​ಗಳು ಕೈಗೆ ಚೆಂಡು ಸಿಕ್ಕಾಗ ಮೊದಲಾಗಿ ಎಂಜಲು ತೆಗೆದು ಅದಕ್ಕೆ ಹಚ್ಚುತ್ತಿದ್ದರು. ಚೆಂಡಿನ ಒಂದು ಭಾಗವನ್ನು ಶೈನ್ ಮಾಡುವ ಮೂಲಕ ಅದು ಸ್ವಿಂಗ್ ಆಗುವಂತೆ ಮಾಡುವುದಕ್ಕಾಗಿ ಈ ರೀತಿ ಮಾಡಲಾಗುತ್ತದೆ. ಆದರೆ ಕರೊನಾ ಭೀತಿಯಿಂದಾಗಿ ಕ್ರಿಕೆಟಿಗರು ಇನ್ನು ಚೆಂಡಿಗೆ ಎಂಜಲು ಹಚ್ಚುವಂತಿಲ್ಲ. ಬೆವರನ್ನು ಮಾತ್ರ ಹಚ್ಚಬಹುದಾಗಿದೆ. ಐಸಿಸಿ ನಿಯಮದಂತೆ ಇನ್ನು ಚೆಂಡಿಗೆ ಎಂಜಲು ಹಚ್ಚಿದರೆ ಪ್ರತಿ ಇನಿಂಗ್ಸ್​ನಲ್ಲಿ ಮೊದಲೆರಡು ಬಾರಿ ಅಂಪೈರ್​ಗಳು ಎಚ್ಚರಿಕೆ ನೀಡುತ್ತಾರೆ. ಬಳಿಕ 5 ರನ್ ದಂಡ ವಿಧಿಸಲಾಗುತ್ತದೆ ಮತ್ತು ಈ 5 ರನ್ ಬ್ಯಾಟಿಂಗ್ ತಂಡದ ಇನಿಂಗ್ಸ್​ಗೆ ಸೇರ್ಪಡೆಯಾಗುತ್ತದೆ.

    ಹೆಚ್ಚುವರಿ ಡಿಆರ್​ಎಸ್ ಅವಕಾಶ

    ತಟಸ್ಥ ಅಂಪೈರ್​ಗಳಿಲ್ಲದ ಕಾರಣ ತೀರ್ಪಗಳು ಏಕಪಕ್ಷೀಯವಾಗುವ ಅಪಾಯವನ್ನು ತಪ್ಪಿಸಲು ಐಸಿಸಿ, ಪ್ರತಿ ಇನಿಂಗ್ಸ್​ಗೆ ಹೆಚ್ಚುವರಿ ಡಿಆರ್​ಎಸ್ (ಅಂಪೈರ್ ತೀರ್ಪು ಪರಾಮರ್ಶೆ) ನೀಡಲು ನಿರ್ಧರಿಸಿದೆ. ಟೆಸ್ಟ್​ನಲ್ಲಿ ಹಿಂದೆ ಪ್ರತಿ ಇನಿಂಗ್ಸ್​ನಲ್ಲಿ 2 ವಿಫಲ ಮೇಲ್ಮನವಿಗೆ ಅವಕಾಶವಿದ್ದರೆ, ಈಗ ಅದು 3ಕ್ಕೆ ಏರಿಕೆಯಾಗಿದೆ. ಸೀಮಿತ ಓವರ್​ನಲ್ಲಿ ಇದು 2ಕ್ಕೆ ಏರಿಕೆಯಾಗಿದೆ.

    ತಟಸ್ಥವಲ್ಲ, ಸ್ಥಳೀಯ ಅಂಪೈರ್

    ಕರೊನಾ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಪ್ರಯಾಣವೆಲ್ಲ ನಿರ್ಬಂಧಿಸಲ್ಪಟ್ಟಿರುವ ಕಾರಣ, ಅಂಪೈರ್​ಗಳ ಪ್ರಯಾಣ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಬರುವವರೆಗೆ ಟೆಸ್ಟ್, ಏಕದಿನ, ಟಿ20 ಪಂದ್ಯಗಳಲ್ಲಿ ಸ್ಥಳೀಯ ಅಂಪೈರ್​ಗಳ ಬಳಕೆಗೆ ಐಸಿಸಿ ಅವಕಾಶ ಕಲ್ಪಿಸಿದೆ. ಈ ಮುನ್ನ ಟೆಸ್ಟ್ ಪಂದ್ಯದಲ್ಲಿ ಇಬ್ಬರೂ ತಟಸ್ಥ (ಪಂದ್ಯ ಆಡುವ ಎರಡೂ ದೇಶಗಳಿಗೆ ಸೇರಿರದ) ಅಂಪೈರ್​ಗಳಿರಬೇಕೆಂಬ ನಿಯಮವಿದ್ದರೆ, ಏಕದಿನ, ಟಿ20 ಪಂದ್ಯಗಳಲ್ಲಿ ಒಬ್ಬ ತಟಸ್ಥ ಅಂಪೈರ್ ಇರಬೇಕಿತ್ತು.

    ಸಾಮಾಜಿಕ ಅಂತರದ ಸಂಭ್ರಮಾಚರಣೆ

    ವಿಕೆಟ್ ಬಿದ್ದಾಗ, ಶತಕ ಸಿಡಿಸಿದ ಸಂಭ್ರಮಾಚರಣೆಯ ವೇಳೆ ಕ್ರಿಕೆಟಿಗರು ಅಪ್ಪಿಕೊಳ್ಳುವುದು ಅಥವಾ ಹೈ-ಫೈವ್ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಇನ್ನು ಕ್ರಿಕೆಟಿಗರ ಸಂಭ್ರಮಾಚರಣೆಯ ವೇಳೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವೆನಿಸಿದೆ. ಈಗಾಗಲೆ ಇಂಗ್ಲೆಂಡ್ ಕ್ರಿಕೆಟಿಗರು ಮೊಣಕೈ ತಾಗಿಸಿಕೊಳ್ಳುವ ಮೂಲಕ ಹೊಸ ರೀತಿಯ ಸಂಭ್ರಮಾಚರಣೆಯ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಟಾಸ್ ವೇಳೆ ಉಭಯ ತಂಡಗಳ ನಾಯಕರು ಮತ್ತು ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ವೈರಸ್ ಹರಡುವ ಭೀತಿಯಿಂದ ಈಗಾಗಲೆ ಇದು ಬದಲಾವಣೆ ಆಗಿದೆ. ಪಂದ್ಯದ ವೇಳೆ ಆಟಗಾರರ ನೀರಿನ ಬಾಟಲಿಗಳನ್ನೂ ಹಂಚಿಕೊಳ್ಳದೆ ವೈಯಕ್ತಿಕ ಬಾಟಲಿ ಬಳಸಲಿದ್ದಾರೆ.

    ನಾಸೀರ್​ ಹುಸೇನ್​ ಸೌರವ್​ ಗಂಗೂಲಿ ಅವರನ್ನು ದ್ವೇಷಿಸುವುದು ಏಕೆ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts