ಮತ್ತೆ ಮುನ್ನಲೆಗೆ ಬಂದ IPL ಮ್ಯಾಚ್​ ಫಿಕ್ಸಿಂಗ್​ ಹಗರಣ: 100 ಕೋಟಿ ಕೇಸ್‌ನಲ್ಲಿ ಧೋನಿಗೆ ಎದುರಾಯ್ತು ಹೊಸ ಸಂಕಷ್ಟ! M S Dhoni

ಐಪಿಎಲ್ ಬೆಟ್ಟಿಂಗ್ ಹಗರಣ ಹಾಗೂ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಎಂಎಸ್ ಧೋನಿ
ಐಪಿಎಲ್ ಬೆಟ್ಟಿಂಗ್ ಹಗರಣ ಹಾಗೂ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಎಂಎಸ್ ಧೋನಿ
Published on
ಚೆನ್ನೈ: ಕ್ರಿಕೆಟ್ ಲೋಕದಲ್ಲಿ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಗಳಿಸಿರುವ ಎಂಎಸ್ ಧೋನಿ (M S Dhoni) ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್ ನಡುವಿನ ಕೋಟಿ ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದಿನಕ್ಕೊಂದು ರೋಚಕ ತಿರುವು ಸಿಗುತ್ತಿದೆ.
2013ರ ಐಪಿಎಲ್ ಬೆಟ್ಟಿಂಗ್ ಹಗರಣದ ಕಹಿ ನೆನಪುಗಳನ್ನು ಮತ್ತೆ ಮುನ್ನೆಲೆಗೆ ತಂದಿರುವ ಈ ಪ್ರಕರಣದಲ್ಲಿ, ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಸಂಪತ್ ಕುಮಾರ್ ಸಲ್ಲಿಸಿದ್ದ ಮೂರು ಪ್ರಮುಖ ಅರ್ಜಿಗಳನ್ನು ಪುರಸ್ಕರಿಸುವ ಮೂಲಕ ಮಹತ್ವದ ಆದೇಶ ಹೊರಡಿಸಿದೆ.

ಅಸಲಿಗೆ ಆಗಿದ್ದೇನು?

ಕಳೆದ ಒಂದು ದಶಕದ ಹಿಂದೆ ಅಂದರೆ 2013ರಲ್ಲಿ ನಡೆದ ಐಪಿಎಲ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ತನಿಖೆಯಲ್ಲಿ ಭಾಗಿಯಾಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಜಿ ಸಂಪತ್ ಕುಮಾರ್, ಕೆಲವು ಆರೋಪಗಳನ್ನು ಮಾಡಿದ್ದರು.
ತನ್ನ ವಿರುದ್ಧ ವಿನಾಕಾರಣ ಮಾನ ಹರಾಜು ಹಾಕುವ ಯತ್ನ ನಡೆದಿದೆ ಹಾಗೂ ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ಎಂಎಸ್ ಧೋನಿ, ಸಂಪತ್ ಕುಮಾರ್ ಮತ್ತು ಇತರೆ ಮಾಧ್ಯಮ ಸಂಸ್ಥೆಗಳ ವಿರುದ್ಧ ಬರೋಬ್ಬರಿ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಕಾನೂನು ಸಮರವೇ ಈಗ ಹೊಸ ತಿರುವು ಪಡೆದುಕೊಂಡಿದೆ.

ಆ ಮೂರು ಪ್ರಮುಖ ಬೇಡಿಕೆಗಳು ಯಾವುವು?

ಪ್ರಕರಣದ ವಿಚಾರಣೆ ವೇಳೆ ಧೋನಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಂಪತ್ ಕುಮಾರ್ ಕೋರ್ಟ್ ಮುಂದೆ ಮೂರು ಪ್ರಮುಖ ಷರತ್ತುಗಳನ್ನು ಅಥವಾ ಬೇಡಿಕೆಗಳನ್ನು ಇಟ್ಟಿದ್ದರು.
ಧೋನಿಯವರ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ತಟಸ್ಥ ನ್ಯಾಯಾಂಗ ಅಧಿಕಾರಿಯನ್ನು ನೇಮಿಸಬೇಕು. ಈ ಪ್ರಕ್ರಿಯೆಯ ಸಂಪೂರ್ಣ ವೀಡಿಯೊ ಚಿತ್ರೀಕರಣ ಮಾಡಬೇಕು ಮತ್ತು ಅದರ ಅನ್-ಎಡಿಟೆಡ್ ಪ್ರತಿಯನ್ನು ತಮಗೂ ಹಾಗೂ ನ್ಯಾಯಾಲಯಕ್ಕೂ ನೀಡಬೇಕು.
ಧೋನಿ ದೊಡ್ಡ ಸೆಲೆಬ್ರಿಟಿ ಆಗಿರುವುದರಿಂದ ಅವರ ಹೇಳಿಕೆಯನ್ನು ಯಾವುದೇ ಪಂಚತಾರಾ ಹೋಟೆಲ್ ಅಥವಾ ಖಾಸಗಿ ಬಂಗಲೆಗಳಲ್ಲಿ ದಾಖಲಿಸಬಾರದು. ಬದಲಿಗೆ ನ್ಯಾಯಾಲಯದ ಆವರಣದಲ್ಲಿ ಅಥವಾ ಅಧಿಕೃತ ಸರ್ಕಾರಿ ಕಟ್ಟಡದಲ್ಲಷ್ಟೇ ದಾಖಲಿಸಬೇಕು.
ಈ ವಾದವನ್ನು ಗಂಭೀರವಾಗಿ ಪರಿಗಣಿಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ.ಗೋವಿಂದರಾಜನ್ ತಿಲಕವಾಡಿ, ಸುಪ್ರೀಂ ಕೋರ್ಟ್‌ನ ಹಳೆಯ ಆದೇಶಗಳನ್ನಾಧರಿಸಿ ಸಂಪತ್ ಕುಮಾರ್ ಅವರ ಮೂರೂ ವಿನಂತಿಗಳನ್ನು ಎತ್ತಿಹಿಡಿದಿದ್ದಾರೆ.

ಧೋನಿಗೆ ಈಗಿರುವ ಅವಕಾಶವೇನು?

ಹೈಕೋರ್ಟ್ ಈ ಆದೇಶ ನೀಡಿದೆ ಎಂದಮಾತ್ರಕ್ಕೆ ಇದು ಧೋನಿ ವಿರುದ್ಧದ ಅಂತಿಮ ತೀರ್ಪಲ್ಲ ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದು ಕೇವಲ ಹೇಳಿಕೆ ದಾಖಲಿಸುವ ಕಾರ್ಯವಿಧಾನಕ್ಕೆ ಸಂಬಂಧಿಸಿದ್ದಷ್ಟೇ ಆಗಿದೆ. ಧೋನಿಗೆ ಕಾನೂನು ಪ್ರಕಾರ ತಮ್ಮ ಪ್ರತಿಕ್ರಿಯೆಯನ್ನು ನೀಡಲು ಸಂಪೂರ್ಣ ಹಕ್ಕಿದೆ. ಅರ್ಜಿಗಳನ್ನು ಕ್ರಮಬದ್ಧಗೊಳಿಸಿದ ಬಳಿಕ, ಭಾರತದ ಮಾಜಿ ನಾಯಕ ಈ ಕುರಿತು ತಮ್ಮ ಪ್ರತಿ-ಅಫಿಡವಿಟ್ ಸಲ್ಲಿಸಲು ಮುಕ್ತ ಅವಕಾಶವಿರುತ್ತದೆ.
ಕಳೆದ ವರ್ಷ ಆಗಸ್ಟ್‌ನಲ್ಲೇ ಹೈಕೋರ್ಟ್ ವಕೀಲರೊಬ್ಬರನ್ನು ಆಯುಕ್ತರನ್ನಾಗಿ ನೇಮಿಸಿ ಧೋನಿ ಹೇಳಿಕೆ ಪಡೆಯಲು ಮುಂದಾದಾಗ ಸಂಪತ್ ಕುಮಾರ್ ಅದನ್ನು ವಿರೋಧಿಸಿದ್ದರು. ವಿಭಾಗೀಯ ಪೀಠದಲ್ಲೂ ಹಿನ್ನಡೆಯಾಗಿದ್ದರೂ, ಈಗ ಸಿಕ್ಕಿರುವ ಈ ಹೊಸ ಆದೇಶ ಪ್ರಕರಣವನ್ನು ಮತ್ತಷ್ಟು ಕುತೂಹಲಕಾರಿ ಹಂತಕ್ಕೆ ಕೊಂಡೊಯ್ದಿದೆ. ಕ್ಯಾಪ್ಟನ್ ಕೂಲ್ ಕೋರ್ಟ್ ಮೆಟ್ಟಿಲೇರಿರುವ ಈ ಬೃಹತ್ ಮೊಕದ್ದಮೆ ಮುಂದಿನ ದಿನಗಳಲ್ಲಿ ಯಾವ ದಿಕ್ಕಿಗೆ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net