

ನವದೆಹಲಿ: ಟೀಮ್ ಇಂಡಿಯಾ ಕಂಡ ದಿಗ್ಗಜ ಆಟಗಾರರಲ್ಲಿ ಎಂ.ಎಸ್.ಧೋನಿ ( MS Dhoni ) ಕೂಡ ಒಬ್ಬರು. ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿಯಾಗಿರುವ ಧೋನಿ, ಭಾರತೀಯ ಕ್ರಿಕೆಟ್ ಲೋಕದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಕ್ರೀಡಾಭಿಮಾನಿಗಳ ಮನದಲ್ಲಿ ಭದ್ರವಾದ ಸ್ಥಾನ ಪಡೆದಿದ್ದಾರೆ. ಪ್ರಪಂಚದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳಿಗೆ ಧೋನಿ ಓರ್ವ 'ಕ್ಯಾಪ್ಟನ್ ಕೂಲ್', ಕುಟುಂಬಸ್ಥರು ಹಾಗೂ ಸಹ ಆಟಗಾರರಿಗೆ ಪ್ರೀತಿಯ 'ಮಹಿ'. ಆದರೆ, ಜನಪ್ರಿಯ ನಟಿ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನುಷ್ಕಾ ಸೇನ್ ( Anushka Sen ) ಅವರಿಗೆ ಧೋನಿ ಎಂದರೆ ಪ್ರೀತಿಯ 'ಮಹಿ ಚಾಚು'.
ಬಾಲನಟಿಯಾಗಿ ವೃತ್ತಿಜೀವನ ಆರಂಭಿಸಿ ಇಂದು ಸಿನಿರಂಗದಲ್ಲಿ ಗುರುತಿಸಿಕೊಂಡಿರುವ ಅನುಷ್ಕಾ ಸೇನ್ ಹಾಗೂ ಭಾರತೀಯ ಕ್ರಿಕೆಟ್‌ನ ದಂತಕಥೆ ಧೋನಿ ನಡುವಿನ ಕ್ಯೂಟ್ ಮತ್ತು ಅಪರೂಪದ ಬಾಂಡಿಂಗ್ ಅಭಿಮಾನಿಗಳ ಗಮನ ಸೆಳೆದಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅನುಷ್ಕಾ, ಧೋನಿ ಅವರೊಂದಿಗಿನ ತಮ್ಮ ಸುಂದರ ಸ್ನೇಹ ಮತ್ತು ಅವರೊಂದಿಗೆ ಕಳೆದ ಸವಿನೆನಪುಗಳನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ.
ಅನುಷ್ಕಾ ಸೇನ್ ಹಾಗೂ ಎಂಎಸ್ ಧೋನಿ ಇಬ್ಬರೂ ಜಾಹೀರಾತು ಜಗತ್ತಿನಲ್ಲಿ ಒಂದಾಗಿ ಹಲವು ವರ್ಷ ಕೆಲಸ ಮಾಡಿದ್ದಾರೆ. ಇಬ್ಬರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸುಮಾರು 7 ವರ್ಷಗಳ ಕಾಲ ವಿವಿಧ 21 ಪ್ರಸಿದ್ಧ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಇವರಿಬ್ಬರೂ ಒಂದಾಗಿ ಕಾಣಿಸಿಕೊಂಡಿದ್ದಾರೆ. ಬೇವರಿಜ್ ಕಂಪನಿಗಳಿಂದ ಹಿಡಿದು ಶೂಟಿಂಗ್ ಸೆಟ್‌ಗಳವರೆಗೆ ಇಬ್ಬರ ನಡುವೆ ಬೆಳೆದ ಬಾಂಧವ್ಯವು ಕೇವಲ ವೃತ್ತಿಪರ ಸಹೋದ್ಯೋಗಿಗಳ ಸಂಬಂಧವಾಗಿ ಉಳಿಯದೆ, ಒಂದೇ ಊರಿನವರು ಎಂಬ ಕಾರಣಕ್ಕೆ ಅತ್ಯಂತ ಆತ್ಮೀಯ ಹಾಗೂ ಕುಟುಂಬದ ಸದಸ್ಯರಂತಾಗುವ ಹಂತಕ್ಕೆ ತಲುಪಿದೆ.
ತಮ್ಮ ಮೊದಲ ಭೇಟಿಯ ನೆನಪನ್ನು ಮೆಲುಕು ಹಾಕಿದ ಅನುಷ್ಕಾ ಸೇನ್, "ನಾನು ಧೋನಿ ಅವರನ್ನು ಮೊದಲು ಭೇಟಿಯಾದಾಗ ನನಗೆ ಸುಮಾರು 14 ವರ್ಷ. ತೀರಾ ಚಿಕ್ಕವಳಾಗಿದ್ದ ನಾನು ಮೇಕಪ್ ರೂಮ್‌ಗೆ ಹೋದ ತಕ್ಷಣ ನೇರವಾಗಿ ಧೋನಿ ಅವರ ಬಳಿ ಹೋಗಿ, 'ನೀವು ರಾಂಚಿಯವರಲ್ವೇ? ನಾನು ಕೂಡ ರಾಂಚಿಯವಳೇ!' ಎಂದು ಹೆಮ್ಮೆಯಿಂದ ಹೇಳಿದೆ. ನನ್ನ ಮಾತು ಕೇಳಿ ಧೋನಿ ಮುಖದಲ್ಲಿ ದೊಡ್ಡ ಮಂದಹಾಸ ಮೂಡಿತು. 'ಹೌದಾ? ನಿಜವಾಗಲೂ ನೀನು ರಾಂಚಿಯವಳಾ?' ಎಂದು ಅತ್ಯಂತ ಆತ್ಮೀ ಯತೆಯಿಂದ ಕೇಳಿದರು. ಆ ಕ್ಷಣದಿಂದಲೇ ನಮ್ಮಿಬ್ಬರ ನಡುವೆ ಸ್ನೇಹದ ಸೇತುವೆ ನಿರ್ಮಾಣವಾಯಿತು" ಎಂದು ಹೇಳಿಕೊಂಡಿದ್ದಾರೆ.
ಮೊದಲ ಭೇಟಿಯ ನಂತರದ ದಿನಗಳಲ್ಲಿ ಶೂಟಿಂಗ್ ಸ್ಪಾಟ್‌ನಲ್ಲಿ ಇಬ್ಬರ ಬಾಂಧವ್ಯ ಇನ್ನಷ್ಟು ಗಟ್ಟಿಯಾಯಿತು. "ನಮ್ಮ ಸಂಬಂಧ ಎಂದಿಗೂ ಇಬ್ಬರು ನಟ-ನಟಿಯರ ಸಂಬಂಧವಾಗಿರಲಿಲ್ಲ. ಧೋನಿ ಸೆಟ್‌ಗೆ ಬಂದ ತಕ್ಷಣ ನನ್ನನ್ನು ಪ್ರೀತಿಯಿಂದ 'ಚಿಕ್ಕಿ!' ಎಂದು ಕರೆಯುತ್ತಿದ್ದರು. ನಾನು ತಕ್ಷಣ 'ಚಾಚು!' ಎಂದು ಓಡಿ ಹೋಗುತ್ತಿದ್ದೆ. ಧೋನಿ ಅವರ ಸರಳತೆ ಹಾಗೂ ಪ್ರೀತಿಯ ಸ್ವಭಾವದಿಂದಾಗಿ ನಾವಿಬ್ಬರೂ ಸತತ 7 ವರ್ಷಗಳ ಕಾಲ 21 ಜಾಹೀರಾತುಗಳಲ್ಲಿ ಅತ್ಯಂತ ಖುಷಿಯಿಂದ ಅಭಿನಯಿಸಲು ಸಾಧ್ಯವಾಯಿತು" ಎಂದು ಅನುಷ್ಕಾ ತಮ್ಮ ನಡುವಿನ ಸುಂದರ ಬಾಂಧವ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಅಂದಹಾಗೆ, ಅನುಷ್ಕಾ ತಮ್ಮ ಸಿನಿಮಾ ವೃತ್ತಿಜೀವನದಲ್ಲಿ ಬಿಜಿಯಾಗಿದ್ದರೆ, ಅಭಿಮಾನಿಗಳ ಕಣ್ಣು ಮಾತ್ರ ಧೋನಿ ಅವರ ಐಪಿಎಲ್ ಭವಿಷ್ಯದ ಮೇಲಿದೆ. 2027ರ ಐಪಿಎಲ್ ಸೀಸನ್‌ನ ಹರಾಜು ಪ್ರಕ್ರಿಯೆ ಹತ್ತಿರವಾಗುತ್ತಿದ್ದರೂ ಧೋನಿ ಮುಂದಿನ ಸೀಸನ್ ಆಡುತ್ತಾರೋ ಇಲ್ಲವೋ ಎಂಬ ಸಸ್ಪೆನ್ಸ್ ಮುಂದುವರಿದಿದೆ. 45 ವರ್ಷದ ಧೋನಿ, ಗಾಯದ ಸಮಸ್ಯೆಯಿಂದಾಗಿ 2026ರ ಐಪಿಎಲ್ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಒಂದೂ ಪಂದ್ಯವನ್ನು ಆಡಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ ಅವರು ತಮ್ಮ ನಿವೃತ್ತಿಯ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡದಿರುವುದು ಅಭಿಮಾನಿಗಳಲ್ಲಿ ಸಣ್ಣ ಭರವಸೆಯನ್ನು ಕಾಯ್ದುಕೊಳ್ಳುವಂತೆ ಮಾಡಿದೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಐಪಿಎಲ್ ಭವಿಷ್ಯದ ಬಗ್ಗೆ ತಮಾಷೆಯಾಗಿ ಮಾತನಾಡಿದ್ದ ಧೋನಿ, "ಮುಂದಿನ ಸೀಸನ್‌ಗೆ ನನ್ನನ್ನು ಫಿಟ್ ಮಾಡಲು ವೈದ್ಯರ ಮೇಲೆ ಇದ್ದ ಒತ್ತಡ ಈಗ ನನ್ನ ಮೇಲೆ ಬಿದ್ದಿದೆ" ಎಂದು ನಕ್ಕಿದ್ದರು. ಅಲ್ಲದೆ, ಡಿಸೆಂಬರ್ 16 ರಂದು ನಡೆಯಲಿರುವ ಐಪಿಎಲ್ 2027ರ ಹರಾಜಿಗೂ ಮುನ್ನ ಅಂದರೆ ಡಿಸೆಂಬರ್ ವೇಳೆಗೆ ತಮ್ಮ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಸುಳಿವು ನೀಡಿದ್ದಾರೆ. 'ತಲಾ' ಧೋನಿ ಮತ್ತೆ ಐಪಿಎಲ್ ಅಖಾಡಕ್ಕೆ ಇಳಿಯುತ್ತಾರೋ ಅಥವಾ ಕ್ರಿಕೆಟ್‌ಗೆ ಸಂಪೂರ್ಣ ವಿದಾಯ ಹೇಳುತ್ತಾರೋ ಎಂಬುದನ್ನು ತಿಳಿಯಲು ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ, (ಏಜೆನ್ಸೀಸ್).