

ಸೆಂಚುರಿಯನ್: ಇಂಗ್ಲೆಂಡ್ ಬಳಿಕ ದಕ್ಷಿಣ ಆಫ್ರಿಕಾದಲ್ಲೂ ಕರೊನಾ ಹಾವಳಿಯ ನಡುವೆ ಕ್ರಿಕೆಟ್ ಪುನರಾರಂಭಕ್ಕೆ ವೇದಿಕೆ ಸಜ್ಜಾಗಿದೆ. ಟೆಸ್ಟ್, ಏಕದಿನ, ಟಿ20 ಕ್ರಿಕೆಟ್‌ಗಳಿಗೆ ಬದಲಾಗಿ ಹೊಸ ಆವಿಷ್ಕಾರವಾಗಿರುವ 3ಟಿ ಕ್ರಿಕೆಟ್ ಪಂದ್ಯದ ಮೂಲಕ ದಕ್ಷಿಣ ಆಫ್ರಿಕಾದಲ್ಲಿ ಚೆಂಡು-ಬ್ಯಾಟಿನ ಕದನ ಮತ್ತೆ ಆರಂಭವಾಗುತ್ತಿದೆ. ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನಾಚರಣೆಯ ಹಿನ್ನೆಲೆಯಲ್ಲಿ ಶನಿವಾರ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯಲಿರುವ ಸಾಲಿಡಾರಿಟಿ ಕಪ್‌ನ ಈ ಒಂದೇ ಪಂದ್ಯದಲ್ಲಿ 3 ತಂಡಗಳು ಆಡಲಿರುವುದು ವಿಶೇಷವಾಗಿದೆ. ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಪ್ರೇಕ್ಷಕರನ್ನು ನಿರ್ಬಂಧಿಸಲಾಗಿದ್ದು, ಪಂದ್ಯ ಭಾರತದಲ್ಲೂ ನೇರಪ್ರಸಾರ ಕಾಣಲಿದೆ.
ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್ ತೆರವಾದ ನಂತರದಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಪಂದ್ಯ ಇದಾಗಿದೆ. ಈಗಲ್ಸ್, ಕಿಂಗ್‌ಫಿಷರ್ಸ್ ಮತ್ತು ಕೈಟ್ಸ್ ತಂಡಗಳನ್ನು ಕ್ರಮವಾಗಿ ಎಬಿ ಡಿವಿಲಿಯರ್ಸ್, ಹೆನ್ರಿಕ್ ಕ್ಲಾಸೆನ್ ಮತ್ತು ಕ್ವಿಂಟನ್ ಡಿಕಾಕ್ ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾದ ಪ್ರಮುಖ 24 ಆಟಗಾರರು ಈ ಏಕೈಕ ಪಂದ್ಯದಲ್ಲಿ ಆಡಲಿದ್ದಾರೆ. ಈ ಮುನ್ನ ಜೂನ್ 27ರಂದು ಈ ಪಂದ್ಯ ನಿಗದಿಯಾಗಿದ್ದರೂ, ದಕ್ಷಿಣ ಆಫ್ರಿಕಾ ಕ್ರೀಡಾ ಸಚಿವರ ಒಪ್ಪಿಗೆ ಸಿಗದ ಕಾರಣ ಮುಂದೂಡಲ್ಪಟ್ಟಿತ್ತು. ಕುಟುಂಬದ ಆಪ್ತರ ನಿಧನದಿಂದಾಗಿ ವೇಗಿ ಕಗಿಸೊ ರಬಾಡ ಮತ್ತು ಆಲ್ರೌಂಡರ್ ಕ್ರಿಸ್ ಮಾರಿಸ್ ಈ ಪಂದ್ಯದಿಂದ ಹಿಂದೆ ಸರಿದಿದ್ದಾರೆ.
ತಲಾ 8 ಆಟಗಾರರ 3 ತಂಡಗಳು
3ಟಿ ಕ್ರಿಕೆಟ್ ಪಂದ್ಯದಲ್ಲಿ 3 ತಂಡದಲ್ಲೂ ತಲಾ 8 ಆಟಗಾರರು ಇರುತ್ತಾರೆ. ಒಟ್ಟು 36 ಓವರ್‌ಗಳ ಪಂದ್ಯವನ್ನು ತಲಾ 18 ಓವರ್‌ಗಳಂತೆ 2 ಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಮೊದಲಾರ್ಧದಲ್ಲಿ ಪ್ರತಿ ತಂಡ ತಲಾ 6 ಓವರ್ ಬ್ಯಾಟಿಂಗ್ ಮಾಡಲಿದೆ. ಈ 6 ಓವರ್‌ಗಳಲ್ಲಿ ಭಿನ್ನ ತಂಡಗಳು ಬೌಲಿಂಗ್-ಫೀಲ್ಡಿಂಗ್ ಮಾಡಲಿವೆ. ಮೊದಲು ಯಾವ ತಂಡ ಬ್ಯಾಟಿಂಗ್ ಮಾಡಲಿದೆ ಎಂಬುದನ್ನು ಡ್ರಾ ಮೂಲಕ ನಿರ್ಧರಿಸಲಾಗುವುದು. ಅದಕ್ಕೆ ತಕ್ಕಂತೆ ಆವರ್ತನ ಪದ್ಧತಿಯಲ್ಲಿ ತಂಡಗಳು ಬೌಲಿಂಗ್-ಫೀಲ್ಡಿಂಗ್ ಮಾಡಲಿವೆ. ಬ್ಯಾಟಿಂಗ್-ಬೌಲಿಂಗ್ ಮಾಡದ ಅವಧಿಯಲ್ಲಿ ತಂಡ ಡಗ್‌ಔಟ್‌ನಲ್ಲಿ ವಿಶ್ರಾಂತಿ ಪಡೆಯಲಿದೆ. ತಂಡವೊಂದು ಒಟ್ಟು 12 ಓವರ್ ಆಡಲಿದ್ದು, ಇದಕ್ಕೆ ಒಂದೇ ಚೆಂಡು ಬಳಕೆಯಾಗಲಿದೆ.
ಚಿನ್ನ, ಬೆಳ್ಳಿ, ಕಂಚಿಗೆ ಹೋರಾಟ!
ಪಂದ್ಯದ ದ್ವಿತೀಯಾರ್ಧದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡವನ್ನು, ಮೊದಲಾರ್ಧದಲ್ಲಿ ಗರಿಷ್ಠ ಸ್ಕೋರ್ ಮಾಡಿದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಎರಡೂ ಇನಿಂಗ್ಸ್ ಸೇರಿ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿ ಗೆಲುವು ದಾಖಲಿಸುವ ತಂಡ ಸ್ವರ್ಣ ಪಡೆದರೆ, ಮತ್ತೆರಡು ತಂಡಗಳು ಬೆಳ್ಳಿ ಮತ್ತು ಕಂಚಿಗೆ ತೃಪ್ತಿಪಡಲಿವೆ. ಚಿನ್ನಕ್ಕೆ ಟೈ ಆದರೆ ಸೂಪರ್ ಓವರ್ ಇರಲಿದೆ. ಬೆಳ್ಳಿಗೆ ಟೈ ಆದರೆ ಗೌರವ ಹಂಚಿಕೆಯಾಗಲಿದೆ.
ಒಬ್ಬಂಟಿ ಬ್ಯಾಟ್ಸ್‌ಮನ್‌ಗೂ ಬ್ಯಾಟಿಂಗ್ ಚಾನ್ಸ್!
ತಂಡವೊಂದು 7 ವಿಕೆಟ್ ಕಳೆದುಕೊಂಡರೆ, ಕೊನೆಯ ಬ್ಯಾಟ್ಸ್‌ಮನ್ ಒಬ್ಬನೇ ಬ್ಯಾಟಿಂಗ್ ಮುಂದುವರಿಸಬಹುದಾಗಿರುತ್ತದೆ. ಆದರೆ ಆತ ಸಮಸಂಖ್ಯೆಯ ರನ್‌ಗಳನ್ನಷ್ಟೇ ಅಂದರೆ, 2 ರನ್, ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಮಾತ್ರ ಗಳಿಸಬಹುದು. ಪಂದ್ಯದಲ್ಲಿ ಬೌಲರ್ ಒಬ್ಬ ಗರಿಷ್ಠ 3 ಓವರ್ ಎಸೆಯಬಹುದು.
11 ಫೀಲ್ಡರ್‌ಗಳಿರುತ್ತಾರೆ!
ತಂಡವೊಂದರಲ್ಲಿ 8 ಆಟಗಾರರಷ್ಟೇ ಇದ್ದರೂ, ಫೀಲ್ಡಿಂಗ್‌ನಲ್ಲಿ 11 ಆಟಗಾರರಿರುತ್ತಾರೆ. 3 ಆಟಗಾರರನ್ನು ಡಗ್‌ಔಟ್‌ನಲ್ಲಿ ಕುಳಿತುಕೊಳ್ಳುವ 3ನೇ ತಂಡದಿಂದ ಬೌಲಿಂಗ್ ಟೀಮ್ ಆಯ್ಕೆ ಮಾಡಿಕೊಳ್ಳುತ್ತದೆ. ವೈಡ್, ನೋಬಾಲ್, ಬೌನ್ಸರ್‌ಗಳ ನಿಯಮ ಇತರ ಸೀಮಿತ ಓವರ್ ಕ್ರಿಕೆಟ್‌ನಂತೆಯೇ ಇರಲಿದೆ.
ಕರೊನಾ ಪೀಡಿತರಿಗೆ ನೆರವು
ಸಾಲಿಡಾರಿಟಿ ಕಪ್ ಪ್ರದರ್ಶನ ಪಂದ್ಯದ ನೇರಪ್ರಸಾರ ಮತ್ತು ಪ್ರಾಯೋಜಕತ್ವ ಹಕ್ಕಿನಿಂದ ಬಂದ ಹಣ ದಕ್ಷಿಣ ಆಫ್ರಿಕಾದ ಕೋವಿಡ್-19 ಪೀಡಿತರ ನೆರವಿಗೆ ಬಳಕೆಯಾಗಲಿದೆ. ದಕ್ಷಿಣ ಆಫ್ರಿಕಾದ ಆಟಗಾರರು 3 ತಿಂಗಳ ಬಳಿಕ ಕಣಕ್ಕಿಳಿಯಲಿದ್ದು, ಎಲ್ಲರಿಗೂ ಕರೊನಾ ಪರೀಕ್ಷೆ ಮಾಡಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ 3.24 ಲಕ್ಷ ಕರೊನಾ ಪ್ರಕರಣ ದಾಖಲಾಗಿದ್ದು, 4,669 ಮಂದಿ ಮೃತಪಟ್ಟಿದ್ದಾರೆ. 1. 53 ಲಕ್ಷ ಸಕ್ರಿಯ ಪ್ರಕರಣಗಳಿವೆ.
3 ತಂಡಗಳು:
ಕಿಂಗ್‌ಫಿಷರ್ಸ್: ರೀಜಾ ಹೆಂಡ್ರಿಕ್ಸ್ (ನಾಯಕ), ಹೆನ್ರಿಕ್ ಕ್ಲಾಸೆನ್, ಫ್ಾ ಡು ಪ್ಲೆಸಿಸ್, ತಬರೇಜ್ ಶಮ್ಸಿ, ಜಾನೆಮನ್ ಮಲನ್, ಗ್ಲೆಂಟರ್ ಸ್ಟರ‌್ಮನ್, ಗೆರಾರ್ಡ್ ಕೋಯೆಟ್ಜೀ, ಥಂಡೊ ಎನ್‌ಟಿನಿ.
ಕೈಟ್ಸ್: ಕ್ವಿಂಟನ್ ಡಿಕಾಕ್ (ನಾಯಕ), ಡೇವಿಡ್ ಮಿಲ್ಲರ್, ಟೆಂಬಾ ಬವುಮಾ, ಆನ್ರಿಚ್ ನೋರ್ಜೆ, ಡ್ವೇಯ್ನ ಪ್ರಿಟೋರಿಯಸ್, ಬ್ಯೂರನ್ ಹೆಂಡ್ರಿಕ್ಸ್, ಜೆಜೆ ಸ್ಮಟ್ಸ್, ಲುಥೋ ಸಿಪಮ್ಲ.
ಈಗಲ್ಸ್: ಎಬಿ ಡಿವಿಲಿಯರ್ಸ್ (ನಾಯಕ), ಐಡೆನ್ ಮಾರ್ಕ್ರಮ್, ಲುಂಜಿ ಎನ್‌ಗಿಡಿ, ಆಂಡಿಲ್ ಪೆಹ್ಲುಕ್‌ವಾಯೊ, ರಾಸಿ ವಾನ್ ಡರ್ ಡುಸೆನ್, ಜೂನಿಯರ್ ಡಾಲಾ, ಕೈಲ್ ವೆರೆಯ್‌ನೆ, ಜೋರ್ನ್ ಫೆರ್ಟೂಯಿನ್.
*ಪಂದ್ಯ ಆರಂಭ: ಮಧ್ಯಾಹ್ನ 2.30 *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1, 2.