ಬಾಯ್​ಫ್ರೆಂಡ್ ಬರ್ತ್‌ಡೇಗೆ ಸರ್ಪ್ರೈಸ್ ನೀಡಿದ ಜ್ವಾಲಾ ಗುಟ್ಟಾ!

jwala vishal
Published on

ಹೈದರಾಬಾದ್: ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಮತ್ತು ಟಾಲಿವುಡ್ ನಟ ವಿಷ್ಣು ವಿಶಾಲ್ ಕಳೆದ ಕೆಲ ಸಮಯದಿಂದ ಸ್ನೇಹ ಹೊಂದಿದ್ದಾರೆ. ವಿಷ್ಣು ವಿಶಾಲ್‌ಗೆ ಶುಕ್ರವಾರ 36ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಜ್ವಾಲಾ ಗುಟ್ಟಾ ಗೆಳೆಯನಿಗೆ ಸರ್ಪ್ರೈಸ್ ನೀಡಿದ್ದಾರೆ.

ಹೈದರಾಬಾದ್‌ನವರಾಗಿರುವ ಕಾಮನ್ವೆಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತೆ ಜ್ವಾಲಾ ಗುಟ್ಟಾ ಚೆನ್ನೈನಲ್ಲಿರುವ ವಿಷ್ಣು ವಿಶಾಲ್ ಮನೆಗೆ ಜನ್ಮದಿನದಂದು ಅಚ್ಚರಿಯ ಭೇಟಿ ನೀಡಿದ್ದಾರೆ. ಕೇಕ್ ಕತ್ತರಿಸಿ ಜ್ವಾಲಾ ಗುಟ್ಟಾ ಜತೆಗೆ ತೆಗೆಸಿಕೊಂಡಿರುವ ಚಿತ್ರದೊಂದಿಗೆ ವಿಷ್ಣು ವಿಶಾಲ್, ‘ನನ್ನ ಬರ್ತ್‌ಡೇ ಸರ್ಪ್ರೈಸ್, ಜ್ವಾಲಾ ಗುಟ್ಟಾ’ ಎಂದು ಬರೆದುಕೊಂಡಿದ್ದಾರೆ. 36 ವರ್ಷದ ಜ್ವಾಲಾ ಗುಟ್ಟಾ ಕೂಡ ವಿಷ್ಣು ವಿಶಾಲ್ ಜತೆಗಿರುವ ಚಿತ್ರವನ್ನು ಟ್ವೀಟಿಸಿ, ‘ಹ್ಯಾಪಿ ಬರ್ತ್‌ಡೇ ಬೇಬಿ’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಲವ್​ ಇಮೋಜಿ ಪ್ರಕಟಿಸಿದ್ದಾರೆ.

ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಅವರನ್ನು ವರಿಸಿದ್ದ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ, 6 ವರ್ಷಗಳ ದಾಂಪತ್ಯ ಜೀವನದ ಬಳಿಕ 2011ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ ಜತೆಗೂ ಅವರ ಹೆಸರು ಕೇಳಿಬಂದಿತ್ತು. ಕಳೆದೊಂದು ವರ್ಷದಿಂದ ವಿಷ್ಣು ವಿಶಾಲ್ ಜತೆಗೆ ಜ್ವಾಲಾ ಡೇಟಿಂಗ್‌ನಲ್ಲಿದ್ದಾರೆ. 2020ರ ವರ್ಷಾರಂಭದಲ್ಲಿ ಜತೆಯಾಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವ ಮೂಲಕ ಇದನ್ನು ದೃಢಪಡಿಸಿದ್ದರು. ವಿಷ್ಣು ವಿಶಾಲ್ 2011ರಲ್ಲಿ ತಮಿಳು ನಟ ಕೆ. ನಟರಾಜ್ ಅವರ ಪುತ್ರಿ ರಜಿನಿಯನ್ನು ವಿವಾಹವಾಗಿದ್ದರು. 2017ರಲ್ಲಿ ಪುತ್ರ ಜನಿಸಿದ ಬಳಿಕ 2018ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net