2024ರ ಟಿ-20 ವಿಶ್ವಕಪ್​ಗೆ 'ಇವರ' ಜತೆಗೆ ಡಿಕೆಯನ್ನು ಆಯ್ಕೆ ಮಾಡ್ಕೊಳ್ಳಿ; ಬಿಸಿಸಿಐಗೆ ಕ್ರಿಕೆಟ್ ಫ್ಯಾನ್ಸ್​ ಸಲಹೆ

WhatsApp Image 2024-04-20 at 4.04.25 PM
Published on

ನವದೆಹಲಿ: ಐಪಿಎಲ್ 2024ರ ಆವೃತ್ತಿ ಶುರು ಆದಾಗಿನಿಂದಲೂ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ಮಹಾಪೂರವೇ ಹರಿದುಬರುತ್ತಿದೆ. ಕಾರಣ, ಈ ಸೀಸನ್​ಲ್ಲಿ ಆಡುತ್ತಿರುವ 10 ತಂಡಗಳು ಸಹ ಬಲಿಷ್ಠವಾಗಿದ್ದು, ಭರ್ಜರಿ ಪೈಪೋಟಿ ಕೊಡುವಲ್ಲಿ ಮುಂಚೂಣಿಯಲ್ಲಿವೆ. ಪ್ರತಿ ಪಂದ್ಯವು ರೋಚಕವಾಗುತ್ತಿದ್ದು, ನೋಡುಗರಲ್ಲಿ ಉತ್ಸಾಹ, ಕೌತುಕ ಹೆಚ್ಚಿಸುತ್ತಿದೆ. ಈ ಪೈಕಿ ನಿನ್ನೆ (ಏ.19) ನಡೆದ ಲಕ್ನೋ ಸೂಪರ್ ಜೈಂಟ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​​ ನಡುವಿನ ಪಂದ್ಯವು ಸಾಕ್ಷಿ.

ಏ.19ರಂದು ಲಕ್ನೋ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಗೆದ್ದು ಬೀಗಿದ ಕೆ.ಎಲ್. ರಾಹುಲ್ ಪಡೆ ಕಡೆಯ ಒಂದು ಓವರ್​ ಇರುವ ಮುನ್ನವೇ ಪಂದ್ಯವನ್ನು ವಶಪಡಿಸಿಕೊಂಡಿತು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಲಕ್ನೋ, ಗಾಯಕ್ವಾಡ್ ಪಡೆಗೆ ಬ್ಯಾಟಿಂಗ್ ಮಾಡಲು ಹೇಳಿತು. 20 ಓವರ್​ಗಳಲ್ಲಿ ಕೇವಲ 175 ರನ್​ ಕಲೆಹಾಕುವಲ್ಲಿ ಮಾತ್ರ ಸಿಎಸ್​ಕೆ ಶಕ್ತವಾಯಿತು. ಈ ಸುಲಭ ಗುರಿ ಬೆನ್ನಟ್ಟಿದ ಸೂಪರ್ ಜೈಂಟ್ಸ್​​ಗೆ ಆರಂಭಿಕ ಆಟಗಾರರಾದ ಕೆ.ಎಲ್​. ರಾಹುಲ್ ಮತ್ತು ಕ್ವಿಂಟನ್​ ಡಿಕಾಕ್ ಜತೆಯಾಟ ಗೆಲುವಿನ ದಡ ಸೇರಲು ಹೆಚ್ಚು ಸಹಾಯ ಮಾಡಿತು. ಆದ್ರೆ...

ಈ ಪಂದ್ಯದಲ್ಲಿ ಪ್ರಮುಖ ಆಕರ್ಷಣೆ ಮತ್ತು ಸ್ಟೇಡಿಯಂನಲ್ಲಿ ಸೇರಿದ್ದ 40,000ಕ್ಕೂ ಅಧಿಕ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದದ್ದು ಮಾತ್ರ ಸಿಎಸ್​ಕೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಟ್​ಗಾಗಿ. ಹೌದು, ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ಪರ ಕಣಕ್ಕಿಳಿದ ಧೋನಿ, ಎಂದಿನಂತೆ ಈ ಪಂದ್ಯದಲ್ಲಿಯೂ ಸಹ ಸಿಕ್ಸರ್​, ಫೋರ್ಸ್​ಗಳನ್ನು ಸಿಡಿಸುವ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಈಡೇರಿಸಿದರು. ಕೇವಲ 9 ಎಸೆತಗಳಲ್ಲಿ ಅಜೇಯ 28 ರನ್​ ಸಿಡಿಸಿದ ಮಾಹಿ, ನೋಡುಗರ ಗಮನ ಸೆಳೆಯುವಲ್ಲಿ ಮತ್ತೊಮ್ಮೆ ಯಶಸ್ವಿಯಾದರು.

ಕಳೆದ ಪಂದ್ಯದಲ್ಲಿ ವಾಂಖಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧವೂ ಇದೇ ರೀತಿ ಕಡೆಯ ಓವರ್​ನಲ್ಲಿ ಅಬ್ಬರಿಸಿದ ಧೋನಿ, ಹಾರ್ದಿಕ್ ಪಾಂಡ್ಯ ಬೌಲಿಂಗ್​ನಲ್ಲಿ ಮೂರು ಬಾಲ್​ಗೂ ಬ್ಯಾಕ್​ ಟು ಬ್ಯಾಕ್ ಸಿಕ್ಸರ್​ಗಳನ್ನು ಸಿಡಿಸಿದರು. ಇದು ತಂಡದ ಗೆಲುವಿಗೆ ಮುಖ್ಯ ಕಾರಣವಾಯಿತು. ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಫಿನಿಶರ್​ ಎಂಬ ಪಟ್ಟ ಅಲಂಕರಿಸಿರುವ ಕ್ಯಾಪ್ಟನ್ ಕೂಲ್, ಇದೀಗ ತಮ್ಮ 43ನೇ ವಯಸ್ಸಿನಲ್ಲಿಯೂ ಇದನ್ನು ಸಾಬೀತುಪಡಿಸುತ್ತಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂನಲ್ಲಿ ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದೆ.

ಸದ್ಯ ಧೋನಿ ಆಟದ ವೈಖರಿಯನ್ನು ನೋಡಿ ಬೆರಗಾದ ಫ್ಯಾನ್ಸ್​, ಸೋಷಿಯಲ್ ಮೀಡಿಯಾದಲ್ಲಿ ಮುಂಬರುವ ಟಿ-20 ವಿಶ್ವಕಪ್​ನ ಟೀಂ ಇಂಡಿಯಾ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಮತ್ತು ದಿನೇಶ್ ಕಾರ್ತಿಕ್​ರನ್ನು ಸೇರಿಸಿಕೊಳ್ಳಿ, ಅದ್ಭುತ ಬ್ಯಾಟಿಂಗ್ ಕೊಡುಗೆ ನೀಡುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಅಭಿಪ್ರಾಯಿಸುತ್ತಿದ್ದಾರೆ. ಇದು ಅಭಿಮಾನಿಗಳ ಕ್ರೇಜ್​ ಎಷ್ಟಿದೆ ಎಂಬುದನ್ನು ಮತ್ತೊಮ್ಮೆ, ಮಗದೊಮ್ಮೆ ಸಾಬೀತುಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net