

ನವದೆಹಲಿ: ಐಪಿಎಲ್ 2024ರ ಆವೃತ್ತಿಗೆ ಈಗಾಗಲೇ ದಿನಗಣನೆ ಆರಂಭಗೊಂಡಿದ್ದು, ಇದಕ್ಕೂ ಮೊದಲೇ ಮುಂಬೈ ಇಂಡಿಯನ್ಸ್ ತಂಡದ ನೂತನ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ವಿರುದ್ಧ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂಬರುವ ಐಪಿಎಲ್ ಸೀಸನ್ಗೂ ಮುನ್ನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾರ್ಕ್ ಬೌಚರ್ ಮತ್ತು ಹಾರ್ದಿಕ್ ಭಾಗಿಯಾಗಿದ್ದರು. ಈ ಪ್ರೆಸ್ಮೀಟ್ ನಡೆದ ಕೆಲವೇ ಗಂಟೆಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಅಸಮಾಧಾನ ಹೊರಹಾಕುತ್ತಿದ್ದಾರೆ.
ಪತ್ರಿಕಾಗೋಷ್ಠಿಯ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಹಿನ್ನಡೆ ಉಂಟಾಗಿದೆ. ಹಾರ್ದಿಕ್ ವಿರುದ್ಧ ಅಸಮಾಧಾನಗೊಂಡ ಕ್ರಿಕೆಟ್ ಅಭಿಮಾನಿಗಳು ಎಕ್ಸ್ನಲ್ಲಿ (ಈ ಹಿಂದಿನ ಟ್ವಿಟರ್) ರೋಹಿತ್ ಶರ್ಮಾ ಅವರ ಕ್ರಿಕೆಟಿಂಗ್ ಶಾಟ್ಸ್ ಮತ್ತು ಫೋಟೋಗಳನ್ನು ಹಾಕಿ, ಅದರ ಕೆಳಗೆ #RIPHardikPandya ಎಂದು ಹ್ಯಾಶ್ಟ್ಯಾಗ್ ಬಳಸಿ ಪೋಸ್ಟ್ ಮಾಡುತ್ತಿದ್ದಾರೆ. ಸದ್ಯ ಇದು ಟ್ರೆಂಡಿಂಗ್ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ.
ಮುಂಬೈ ಇಂಡಿಯನ್ಸ್ ತಂಡ ನಾಯಕತ್ವದಿಂದ ರೋಹಿತ್ ಶರ್ಮಾರನ್ನು ವಜಾಗೊಳಿಸಿದ ಬೆನ್ನಲ್ಲೇ ಐದು ಬಾರಿ ಟೀಮ್ನ ಗೆಲುವಿನ ಹಾದಿಗೆ ಕರೆದೊಯ್ದು, ಚಾಂಪಿಯನ್ ಆಗಿ ಮಾಡಿದ ರೋಹಿತ್ ಅವರ ನಾಯಕನ ಸ್ಥಾನವನ್ನು ಹಾರ್ದಿಕ್ಗೆ ಕೊಟ್ಟಿದ್ದಕ್ಕೆ ಎಂಐ ಮ್ಯಾನೇಜ್‌ಮೆಂಟ್ ಮತ್ತು ಮಾಲೀಕರ ಮೇಲೆ ಕ್ರಿಕೆಟ್ ಅಭಿಮಾನಿಗಳು ಭಾರೀ ಅಸಮಾಧಾನಗೊಂಡಿದ್ದರು. ಇದು ಮುಂದಿನ ದಿನಗಳಲ್ಲಿ ಸರಿ ಹೋಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದ್ರೆ, ಇದ್ಯಾಕೋ ಮುಗಿಯವಂತೆ ಕಾಣುತ್ತಿಲ್ಲ.
ಕಳೆದ ವರ್ಷ ಗುಜರಾತ್ ಟೈಟನ್ಸ್ ಕೈಬಿಟ್ಟು ದಿಢೀರ್ ಮುಂಬೈ ಇಂಡಿಯನ್ಸ್ ಸೇರ್ಪಡೆಗೊಂಡ ಪಾಂಡ್ಯ, ತಂಡದ ಕ್ಯಾಪ್ಟನ್ ಸ್ಥಾನ ಪಡೆದರು. ಈ ಬಗ್ಗೆ ಕ್ರಿಕೆಟ್ ಫ್ಯಾನ್ಸ್ಗೆ ಕಿಂಚಿತ್ತು ಇಷ್ಟವಿರಲಿಲ್ಲ. ಬದಲಾವಣೆ ಮಾಡಿ ಎಂದು ಇದೇ ಸಾಮಾಜಿಕ ಜಾಲತಾಣದಲ್ಲಿ ಟೀಮ್ ಮ್ಯಾನೆಜ್ಮಂಟ್ಗೆ ಒತ್ತಾಯಿಸಲಾಗಿತ್ತು. ಆದ್ರೂ ಸಹ ಕೋಚ್ ಸೇರಿದಂತೆ ಯಾರು ಕೂಡ ಇದಕ್ಕೆ ಒಪ್ಪದೆ, ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
ಯಾವಾಗ ಹಾರ್ದಿಕ್ ಮುಂಬೈ ತಂಡದ ನೂತನ ನಾಯಕ ಎಂದು ಘೋಷಣೆಯಾಯಿತೋ ಅಂದೇ ಪಾಂಡ್ಯ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಲು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಈ ಅಸಮಾಧಾನ ಕಡಿಮೆಯಾಗುವಂತೆ ತೋರುತ್ತಿಲ್ಲ. ಇದೇ ಮಾರ್ಚ್ 22ರಿಂದ ಐಪಿಎಲ್ ಪಂದ್ಯಗಳು ಸ್ಟಾರ್ಟ್ ಆಗಲಿದ್ದು, ನಾಯಕನಾಗಿ ಹಾರ್ದಿಕ್ ಹೇಗೆ ತಮ್ಮ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).