

ನವದೆಹಲಿ: ಐಪಿಎಲ್ 14ನೇ ಆವೃತ್ತಿ ಮೊಟಕುಗೊಳ್ಳುವುದಕ್ಕೆ ಮುನ್ನವೇ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಟೂರ್ನಿಯಿಂದ ಹಿಂದೆ ಸರಿದಿದ್ದರು. ಚೆನ್ನೈನಲ್ಲಿರುವ ಅವರ ಕುಟುಂಬದ ಸದಸ್ಯರಿಗೂ ಕರೊನಾ ಸೋಂಕು ಕಾಣಿಸಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು. ಐಪಿಎಲ್ನಿಂದ ಹಿಂದೆ ಸರಿಯಲು ತಾವು ಎದುರಿಸಿದ ಅನಿವಾರ್ಯ ಪರಿಸ್ಥಿತಿಯ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಅಶ್ವಿನ್ ಈಗ ವಿವರಣೆ ನೀಡಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ ಮುಂಬೈನಲ್ಲಿ ಟೀಮ್ ಇಂಡಿಯಾದ ಕ್ವಾರಂಟೈನ್ನಲ್ಲಿರುವ ಅಶ್ವಿನ್, ಕುಟುಂಬದ ಸದ್ಯರಿಗೆ ಕರೊನಾ ಸೋಂಕು ಕಾಣಿಸಿಕೊಂಡ ಬಳಿಕ 8-9 ದಿನಗಳ ಕಾಲ ನಿದ್ದೆಯನ್ನೇ ಮಾಡಿರಲಿಲ್ಲವಂತೆ. ನಿದ್ದೆಯಿಲ್ಲದ ರಾತ್ರಿಗಳಿಂದಾಗಿ ಅವರು ತೀವ್ರ ಬಳಲಿಕೆ ಎದುರಿಸುತ್ತಿದ್ದರು. ನಿದ್ದೆಯನ್ನೇ ಮಾಡುವುದು ಐಪಿಎಲ್ ಪಂದ್ಯಗಳನ್ನು ಆಡುವುದು ಕಠಿಣವಾಗಿತ್ತು. ಹೀಗಾಗಿ ಕೊನೆಗೆ ಟೂರ್ನಿಯನ್ನೇ ತ್ಯಜಿಸಿ ಮನೆಗೆ ತೆರಳಲು ನಿರ್ಧರಿಸಿದೆ ಎಂದು ಅಶ್ವಿನ್ ವಿವರಿಸಿದ್ದಾರೆ.
ಕ್ವಾರಂಟೈನ್ನಲ್ಲಿರುವುದು ಎಷ್ಟು ಕಠಿಣ ಎಂಬ ಬಗ್ಗೆಯೂ ಮಾತನಾಡಿರುವ ಅಶ್ವಿನ್, ಐಷಾರಾಮಿ ಪಂಚತಾರಾ ಹೋಟೆಲ್ನಲ್ಲಿ ನಾವಿರುವುದು ಹೊರಗಿನವರಿಗೆ ಕಷ್ಟಕರವಲ್ಲದಂತೆ ಕಾಣಿಸಬಹುದು. ಆದರೆ ಇದು ಸುಲಭವಾದುದಲ್ಲ. 14 ದಿನಗಳ ಕಾಲ ಹೋಟೆಲ್ನಲ್ಲೇ ಇರಬೇಕು. ಪ್ರತಿ 2 ದಿನಕ್ಕೊಮ್ಮೆ ಕರೊನಾ ಪರೀಕ್ಷೆ ಎದುರಿಸಬೇಕು. ಕ್ವಾರಂಟೈನ್ ವೇಳೆ ಸಮಯ ಕಳೆಯುವುದೇ ದೊಡ್ಡ ಸಾಹಸ ಎಂದು ಹೇಳಿದ್ದಾರೆ.
ಭಾರತ ತಂಡದ ಇತರೆಲ್ಲ ಆಟಗಾರರು ಈಗಾಗಲೆ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದರೆ, ಅಶ್ವಿನ್ ಅವರು ಭಾರತದ್ದೇ ಆದ ಲಸಿಕೆ ಕೋವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ಕೋವ್ಯಾಕ್ಸಿನ್ ಲಸಿಕೆಯ ಎರಡೂ ಡೋಸ್ಗಳನ್ನು ಈಗಾಗಲೆ ತೆಗೆದುಕೊಂಡಿರುವೆ ಎಂದೂ ಅಶ್ವಿನ್ ತಿಳಿಸಿದ್ದಾರೆ.