

ನವದೆಹಲಿ: ಜೂನ್ 01ರಿಂದ ಆರಂಭವಾಗಲಿರುವ ಚುಟುಕು ವಿಶ್ವ ಸಮರದ ಬಳಿಕ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯು ಕೊನೆಗೊಳ್ಳಲಿದ್ದು, ಇದಾದ ಬಳಿಕ ಜುಲೈ 1ರಂದು ನೂತನ ಮುಖ್ಯ ಕೋಚ್ಗೆ ಟೀಂ ಇಂಡಿಯಾದ ಕಮಾಂಡ್ ಹಸ್ತಾಂತರವಾಗಲಿದೆ. ಆದರೆ, ಟೀಮ್ ಇಂಡಿಯಾ ಕೋಚ್ ಆಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.
ಖ್ಯಾತ ಮಾಜಿ ಆಟಗಾರರು ಈ ಹುದ್ದೆಯನ್ನು ಅಲಂಕರಿಸಲು ಹಿಂದೇಟು ಹಾಕುತ್ತಿದ್ದು, ಪ್ರತಿಭಾವಂತ ಕೋಚ್ ಹುಡುಕಾಟಕ್ಕಾಗಿ ಬಿಸಿಸಿಐ ಶೋಧ ನಡೆಸುತ್ತಿದೆ. ಆದರೆ, ಕೇಳಿ ಬಂದಿರುವ ಮಾಹಿತಿ ಪ್ರಕಾರ ಟೀಮ್ ಇಂಡಿಯಾ ಕೋಚ್ ಆಗಿ ಬಿಸಿಸಿಐ ಗೌತಮ್ ಗಂಭೀರ್ ಅವರನ್ನು ನೇಮಿಸಲಿದ್ದು, ಗೌತಮ್ ವಿಧಿಸಿರುವ ಎಲ್ಲಾ ಷರತ್ತುಗಳಿಗೆ ಬಿಸಿಸಿಐ ಒಪ್ಪಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಹೊಸ ಚರ್ಚೆ ಒಂದನ್ನು ಹುಟ್ಟುಹಾಕಿದೆ.
ಆಟಗಾರನ ಜೀವನದಲ್ಲಿ ಕೋಚ್ನ ಪ್ರಾಮುಖ್ಯತೆ ಬಹಳ ಮುಖ್ಯ. ತರಬೇತುದಾರನ ಮಾರ್ಗದರ್ಶನ ಮತ್ತು ನಿರಂತರ ತರಬೇತಿಯು ಯಾವುದೇ ಆಟಗಾರನ ವೃತ್ತಿಜೀವನವನ್ನು ರೂಪಿಸುತ್ತದೆ. ಮುಖ್ಯ ಕೋಚ್ ಮೈದಾನದಿಂದ ದೂರ ಉಳಿದಿದ್ದರೂ, ಅವರ ಕೊಡುಗೆ ಮೈದಾನದೊಳಗೆ ಬಹಳ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡಕ್ಕೆ ಮುಖ್ಯ ಕೋಚ್ನನ್ನೂ ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕು ಎಂದು ಬರೆದುಕೊಂಡಿದ್ದಾರೆ.
ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಯಾರು ಎಂಬ ಪ್ರಶ್ನೆಗಳು ಭಾರತ ತಂಡದ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಈಗಾಗಲೇ ಮೂಡಿದೆ. ಏಕೆಂದರೆ ಅನೇಕ ಮಾಜಿ ಕ್ರಿಕೆಟಿಗರು ಈ ಹುದ್ದೆಗೇರಲು ನಿರಾಕರಿಸಿದ್ದಾರೆ. ರಿಕಿ ಪಾಂಟಿಂಗ್ನಿಂದ ಹಿಡಿದು ಜಸ್ಟಿನ್ ಲ್ಯಾಂಗರ್ ತನಕ ಎಲ್ಲರೂ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಬೇಡವೆನ್ನುತ್ತಿದ್ದಾರೆ. ಅಲ್ಲದೆ ಈಗಿರುವ ರಾಹುಲ್ ದ್ರಾವಿಡ್ ಕೂಡ ಈ ಹುದ್ದೆಯಲ್ಲಿ ಮುಂದುವರೆಯಲು ನಿರಾಕರಿಸಿದ್ದಾರೆ. ವಿವಿಎಸ್ ಲಕ್ಷ್ಮಣ್ ಕೂಡ ಈ ಹುದ್ದೆಯನ್ನು ನಿರಾಕರಿಸಿದ್ದರು.
ಹೀಗಾಗಿ ಮುಜುಗರ ತಪ್ಪಿಸಿಕೊಳ್ಳಲು ಸ್ವತಃ ತಾನೇ ಮುಖ್ಯ ಕೋಚ್ ಹುಡುಕಾಟಕ್ಕೆ ಇಳಿದಿರುವ ಬಿಸಿಸಿಐ, ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರ ಹಿಂದೆ ಬಿದ್ದಿದೆ. ಐಪಿಎಲ್ ಫೈನಲ್ ಪಂದ್ಯದ ನಡುವೆ ಕೆಕೆಆರ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆಯೇ ಗಂಗೂಲಿ ಅವರ ಈ ಪೋಸ್ಟ್ ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಮಾಡಬಾರದು ಎಂಬುದನ್ನು ಸೂಚಿಸುತ್ತದೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.