ವಿರಾಟ್​ ಹಾಗೂ ನನ್ನ ನಡುವಿನ ಸಂಬಂಧ ನೀವಂದುಕೊಂಡಂತಿಲ್ಲ: ಗೌತಮ್​ ಗಂಭೀರ್

Gambhir Kohli
Published on

ನವದೆಹಲಿ: ತಮ್ಮ ಸಿಡುಕು ಮನೋಭಾವದಿಂದಲೇ ಕ್ರೀಡಾ ವಲಯದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ಗೌತಮ್​ ಗಂಭೀರ್​ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಐಪಿಎಲ್​ ಶುರುವಾಗುವುದಕ್ಕೂ ಮುನ್ನ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣಾ ರಾಜಕೀಯಕ್ಕೆ ನಿವೃತ್ತಯಿ ಘೋಷಿಸಿದ ಗೌತಮ್​ ಬಳಿಕ ಕೆಕೆಆರ್​ ಮೆಂಟರ್​ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇದಾದ ಬಳಿಕ ಅವರು ಕೆಕೆಆರ್​ ತಂಡಕ್ಕೆ ಕಪ್​ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇತ್ತ ಟೀಮ್​ ಇಂಡಿಯಾ ಲೆಜೆಂಡರಿ ಆಟಗಾರ ಗೌತಮ್ ಗಂಭೀರ್ ದಿನ ಕಳೆದಂತೆ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆಟಗಾರರಲ್ಲಿರುವ ಪ್ರತಿಭೆಯನ್ನು ಹೊರತಂದು ಅವರಿಗೆ ಬೇಕಾದ ಬೆಂಬಲ ನೀಡುವ ಮೂಲಕ ಗಂಭೀರ್ ಕೆಕೆಆರ್​ಗೆ ಹೊಸ ಹೀರೋ ಎನಿಸಿಕೊಂಡಿದ್ದಾರೆ. 17 ನೇ ಆವೃತ್ತಿಯಲ್ಲಿ ಕೆಕೆಆರ್​ ಕಪ್​ ಗೆದ್ದ ಬೆನ್ನಲ್ಲೇ ಅವರು ಟೀಮ್​ ಇಂಡಿಯಾ ಕೋಚ್​ ಆಗುತ್ತಾರೆ ಎಂಬ ವಿಚಾರ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡಲು ಶುರು ಮಾಡಿದೆ.

ಇತ್ತ ಗೌತಮ್​ ಗಂಭೀರ್​ ಹಾಗೂ ವಿರಾಟ್​ ಕೊಹ್ಲಿ ನಡುವಿನ ಸಂಬಂಧ ಎಷ್ಟರ ಮಟ್ಟಿಗೆ ಚೆನ್ನಾಗಿದೆ ಎಂಬ ವಿಚಾರವನ್ನು ಹೊಸದಾಗಿ ಹೇಳಬೇಕಿಲ್ಲ. ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಮುಖಾಮುಖಿಯಾದರೆ ಅಲ್ಲೊಂದಷ್ಟು ಕಿರಿಕ್, ಒಂದಷ್ಟು ದ್ವೇಷ ಮತ್ತೊಂದಷ್ಟು ವಾಗ್ವಾದ ಎಂಬುದು ಸಾಮಾನ್ಯವಾಗಿತ್ತು. ಹೀಗಾಗಿಯೇ ಆರ್​ಸಿಬಿ ಹಾಗೂ ಕೆಕೆಆರ್​ ನಡುವಿನ ಪಂದ್ಯದಲ್ಲಿ ಈ ಇಬ್ಬರು ಮುಖಾಮುಖಿಯಾದಾಗ ಅನೋನ್ಯವಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ. ಇತ್ತ ಈ ಕುರಿತು ಪ್ರತಿಕ್ರಿಯಿಸಿರುವ ಗೌತಮ್​ ಗಂಭೀರ್​ ವಿರಾಟ್​ ಹಾಗೂ ತಮ್ಮ ಸಂಬಂಧದ ಕುರಿತು ಮಾತನಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಗೌತಮ್,  ನನ್ನ ಮತ್ತು ಕೊಹ್ಲಿ ನಡುವೆ ಸಂಬಂಧ ಇಡೀ ದೇಶಕ್ಕೆ ತಿಳಿಯಬೇಕಿಲ್ಲ. ತಮ್ಮ ತಮ್ಮ ತಂಡಗಳನ್ನು ಗೆಲ್ಲುವಂತೆ ಮಾಡಲು ತನ್ನತನ ತೋರಿಸಲು ಇಬ್ಬರಿಗೂ ಹಕ್ಕಿದೆ. ಹೀಗಾಗಿ ಇಬ್ಬರೂ ಅಗ್ರೆಸಿವ್ ಆಗಿ ಕಾಣಿಸಿಕೊಂಡೆವು ಅಷ್ಟೇ. ನಮ್ಮಿಬ್ಬರ ಸಂಬಂಧವು ನಿಮ್ಮೆಲ್ಲರ ಗ್ರಹಿಕೆಯ ವಾಸ್ತವದಿಂದ ತುಂಬಾ ದೂರವಿದೆ. ವಿರಾಟ್ ಕೊಹ್ಲಿಯೊಂದಿಗಿನ ನನ್ನ ಸಂಬಂಧಕ್ಕೆ ಸಾರ್ವಜನಿಕರು ಮಸಾಲಾ ಸೇರಿಸಿದರು. ಹಲವು ಸುದ್ದಿಗಳು ಸೃಷ್ಟಿಯಾದವು. ಆದರೆ ನಾವಿಬ್ಬರೂ ಹಾಗಿಲ್ಲ ಎಂದು ಗೌತಮ್​ ಗಂಭೀರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net