ಡಬ್ಲ್ಯುಟಿಸಿ ಫೈನಲ್​ ಸೋಲಿಗೆ ಪೂಜಾರ ಬಲಿಪಶು: ಸುನೀಲ್​ ಗಾವಸ್ಕರ್​ ಗರಂ

pujara web
Published on

ನವದೆಹಲಿ: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯದಲ್ಲಿ ಭಾರತ ತಂಡದ ಒಟ್ಟಾರೆ ಬ್ಯಾಟಿಂಗ್​ ವಿಭಾಗವೇ ವೈಫಲ್ಯ ಕಂಡಿದ್ದರೂ, ಚೇತೇಶ್ವರ ಪೂಜಾರ ಒಬ್ಬರನ್ನೇ ಬಲಿಪಶು ಮಾಡಿ ತಂಡದಿಂದ ಕೈಬಿಟ್ಟಿರುವ ಬಗ್ಗೆ ಮಾಜಿ ನಾಯಕ ಸುನೀಲ್​ ಗಾವಸ್ಕರ್​ ಕಿಡಿಕಾರಿದ್ದಾರೆ. ಜತೆಗೆ ದೇಶೀಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಬ್ಯಾಟಿಂಗ್​ ನಿರ್ವಹಣೆ ತೋರಿರುವ ಮುಂಬೈ ಬ್ಯಾಟರ್​ ಸರ್ಫ್ರಾಜ್​ ಖಾನ್​ರನ್ನು ವೆಸ್ಟ್​ ಇಂಡೀಸ್​ ಪ್ರವಾಸದ ಟೆಸ್ಟ್​ ಸರಣಿಗೆ ಕಡೆಗಣಿಸಿರುವ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಅವರಂಥ ಸ್ಟಾರ್​ ಆಟಗಾರರಂತೆ ಚೇತೇಶ್ವರ ಪೂಜಾರ ಸಾಮಾಜಿಕ ಜಾಲತಾಣದಲ್ಲಿ ಲಕ್ಷ ಲಕ್ಷ ಹಿಂಬಾಲಕರನ್ನು ಹೊಂದಿಲ್ಲ. ಹೀಗಾಗಿ ಪೂಜಾರ ಅವರನ್ನು ಕೈಬಿಟ್ಟರೆ ಯಾರೂ ಧ್ವನಿ ಎತ್ತುವುದಿಲ್ಲ ಎಂಬ ಕಾರಣಕ್ಕಾಗಿ ಕೈಬಿಡಲಾಗಿದೆ ಎಂದೂ ಗಾವಸ್ಕರ್​ ಆರೋಪಿಸಿದ್ದಾರೆ.

'ಬ್ಯಾಟಿಂಗ್​ ವಿಭಾಗದ ವೈಲ್ಯಕ್ಕೆ ಪೂಜಾರ ಒಬ್ಬರನ್ನೇ ಬಲಿಪಶು ಮಾಡಿರುವುದೇಕೆ? ಅವರು ಭಾರತೀಯ ಕ್ರಿಕೆಟ್​ನ ನಿಷ್ಠಾವಂತ ಸೇವಕ. ಶಾಂತ ಮತ್ತು ಸಮರ್ಥ ಸಾಧಕ. ಆದರೆ ಅವರನ್ನು ಕೈಬಿಟ್ಟರೆ ಸಾಮಾಜಿಕ ಜಾಲತಾಣದಲ್ಲಿ ಯಾರೂ ಧ್ವನಿ ಎತ್ತುವುದಿಲ್ಲ ಎಂಬ ಕಾರಣಕ್ಕಾಗಿ ಕೈಬಿಡಲಾಗಿದೆಯೇ? ಅಥವಾ ಇದು ನಮ್ಮ ಗ್ರಹಿಕೆಗೆ ಮೀರಿರುವುದೇ?' ಎಂದು ಗಾವಸ್ಕರ್​ ಪ್ರಶ್ನಿಸಿದ್ದಾರೆ.

ಪೂಜಾರ ಒಬ್ಬರನ್ನೇ ಕೈಬಿಟ್ಟಿರುವುದಕ್ಕೆ ಮತ್ತು ಇತರರನ್ನು ತಂಡದಲ್ಲಿ ಉಳಿಸಿಕೊಂಡಿರುವುದಕ್ಕೆ ಮಾನದಂಡವೇನು? ಇತ್ತೀಚೆಗಿನ ದಿನಗಳಲ್ಲಿ ಆಯ್ಕೆ ಸಮಿತಿ ಅಧ್ಯಕ್ಷರು ಮಾಧ್ಯಮವನ್ನೇ ಎದುರಿಸುವುದಿಲ್ಲ. ಹೀಗಾಗಿ ಅವರಿಗೆ ಈ ಪ್ರಶ್ನೆಗಳನ್ನು ಎಲ್ಲಿ ಕೇಳಬೇಕೆಂದೇ ಗೊತ್ತಾಗುತ್ತಿಲ್ಲ ಎಂದು ಗಾವಸ್ಕರ್​ ಕಿಡಿಕಾರಿದ್ದಾರೆ.

ಪೂಜಾರ ಕೌಂಟಿ ಕ್ರಿಕೆಟ್​ನಲ್ಲೂ ಆಡುತ್ತಿದ್ದಾರೆ. ಹೀಗಾಗಿ ಕೆಂಪು ಚೆಂಡಿನ ಬಗ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ. ಈಗಿನ ದಿನಗಳಲ್ಲಿ ಆಟಗಾರರು 39&40ನೇ ವಯಸ್ಸಿನವರೆಗೂ ಆಡುತ್ತಾರೆ. ರನ್​ ಗಳಿಸುತ್ತಿರುವ ಮತ್ತು ವಿಕೆಟ್​ ಕಬಳಿಸುತ್ತಿರುವವರೆಗೆ ಅವರನ್ನು ಫಿಟ್​ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ವಯಸ್ಸಿನ ಅಡಚಣೆ ಬಾರದು. ಇತರರೂ ವೈಫಲ್ಯ ಕಂಡಿರುವಾಗ ಒಬ್ಬನನ್ನು ಮಾತ್ರ ಮೂಲೆಗುಂಪು ಮಾಡುವುದು ಸರಿಯಲ್ಲ. ಅಜಿಂಕ್ಯ ರಹಾನೆ ಹೊರತಾಗಿ ಡಬ್ಲ್ಯುಟಿಸಿ ಫೈನಲ್​ನಲ್ಲಿ ಬೇರೆ ಯಾರೂ ಹೆಚ್ಚಿನ ರನ್​ ಗಳಿಸಲಿಲ್ಲ. ಹೀಗಿರುವಾಗ ಪೂಜಾರ ಒಬ್ಬರನ್ನೇ ಕಡೆಗಣಿಸಿರುವುದಕ್ಕೆ ಆಯ್ಕೆಗಾರರು ಉತ್ತರ ನೀಡಬೇಕಾಗುತ್ತದೆ ಎಂದು ಗಾವಸ್ಕರ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net