

IPL : ಪಾಕಿಸ್ತಾನವು 2025ರ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಿರುವುದು ಕ್ರೀಡಾಭಿಮಾನಿಗಳಿಗೆ ತಿಳಿದಿದೆ. ಆದರೆ, ಪಾಕ್ ತಂಡವೇ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಮೆಗಾ ಟೂರ್ನಮೆಂಟ್ ತನ್ನ ತವರಿನಲ್ಲಿ ನಡೆಯುತ್ತಿದ್ದರೂ ಆಟಗಾರರು ಮಾತ್ರ ತಮ್ಮ ಸಾಮರ್ಥ್ಯವನ್ನು ತೋರಿಸಲು ಸಾಧ್ಯವಾಗಿಲ್ಲ.
ಆಘಾತಕಾರಿ ಸಂಗತಿ ಏನೆಂದರೆ, ಪಾಕ್ ತಂಡ ಲೀಗ್ ಹಂತದಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಿಲ್ಲ. ಅವರು ಎದುರಿಸಿದ ಎರಡೂ ಪಂದ್ಯಗಳನ್ನು ಸೋತರೆ, ಒಂದು ಪಂದ್ಯ ಮಳೆಯಿಂದಾಗಿ ರದ್ದಾಯಿತು. ಪರಿಣಾಮವಾಗಿ, ಪಾಕಿಸ್ತಾನ ಸೆಮಿಫೈನಲ್ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಇದರಿಂದ ಪಾಕ್ ಕ್ರೀಡಾಭಿಮಾನಿಗಳು ತಮ್ಮ ಆಟಗಾರರ ಮೇಲೆ ಕೋಪಗೊಂಡಿದ್ದಾರೆ. ಅಭಿಮಾನಿಗಳು ಮಾತ್ರ ಮಾಜಿ ಕ್ರಿಕೆಟಿಗರು ಸಹ ತಮ್ಮ ತಂಡವನ್ನು ಟೀಕಿಸುತ್ತಿದ್ದಾರೆ. ಆದರೆ, ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಮಾತ್ರ ಟೀಮ್ ಇಂಡಿಯಾ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅದರಲ್ಲೂ ಐಪಿಎಲ್ ಅನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ಆತಿಥ್ಯ ವಹಿಸಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ದುಬೈನಲ್ಲಿ ತನ್ನ ಪಂದ್ಯಗಳನ್ನು ಆಡುತ್ತಿದೆ. ಲೀಗ್ ಹಂತದಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಆಡಿರುವ ಟೀಮ್ ಇಂಡಿಯಾ ಎರಡನ್ನೂ ಗೆದ್ದು ಸೆಮಿಫೈನಲ್ಗೆ ಮುನ್ನಡೆದಿದೆ. ಸೆಮಿಫೈನಲ್ನಲ್ಲಿಯೂ ಗೆದ್ದರೆ, ಮಾರ್ಚ್ 9ರಂದು ದುಬೈನಲ್ಲಿ ಫೈನಲ್ ಪಂದ್ಯವನ್ನು ಆಡಲಿದೆ. ಆದಾಗ್ಯೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಮಾಜಿ ಕ್ರಿಕೆಟಿಗರು ವಿಶ್ವ ಕ್ರಿಕೆಟ್ನಲ್ಲಿ ಬಿಸಿಸಿಐ ಪ್ರಾಬಲ್ಯದ ಬಗ್ಗೆ ಕೋಪಗೊಂಡಿದ್ದಾರೆ. ಈ ಸಂದರ್ಭದಲ್ಲಿ, ಇಂಜಮಾಮ್-ಉಲ್-ಹಕ್ ಭಾರತದ ವಿರುದ್ಧ ಎಲ್ಲ ದೇಶಗಳ ಕ್ರಿಕೆಟ್ ಮಂಡಳಿಗಳು ಮತ್ತು ಆಯಾ ತಂಡಗಳ ಆಟಗಾರರಿಗೆ ಪ್ರಮುಖ ಮನವಿ ಮಾಡಿದ್ದಾರೆ.
ವಿಶ್ವದ ಎಲ್ಲ ಅಗ್ರ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುತ್ತಾರೆ. ಹಲವು ಬಾರಿ, ವಿದೇಶಿ ಆಟಗಾರರು ರಾಷ್ಟ್ರೀಯ ಪಂದ್ಯಗಳಿಗಿಂತ ಐಪಿಎಲ್ ಪಂದ್ಯಗಳನ್ನು ಬಯಸುತ್ತಾರೆ. ಆದರೆ, ಭಾರತೀಯ ಆಟಗಾರರು ಬೇರೆ ಯಾವುದೇ ಲೀಗ್ನಲ್ಲಿ ಆಡುವುದಿಲ್ಲ. ಎಲ್ಲ ಕ್ರಿಕೆಟ್ ಮಂಡಳಿಗಳು ಕೂಡ ಇದನ್ನೇ ಪಾಲಿಸಬೇಕು. ತಮ್ಮ ತಂಡಗಳ ಆಟಗಾರರು ಐಪಿಎಲ್ನಲ್ಲಿ ಆಡುವುದನ್ನು ತಡೆಯಬೇಕು ಮತ್ತು ಐಪಿಎಲ್ ಅನ್ನು ಬಹಿಷ್ಕರಿಸಬೇಕು ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಂಜಮಾಮ್-ಉಲ್-ಹಕ್ ಆಗ್ರಹಿಸಿದ್ದಾರೆ.
ಅಂದಹಾಗೆ ಐಪಿಎಲ್ ಆರಂಭದಲ್ಲಿ ಪಾಕಿಸ್ತಾನಿ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದರು. ಐಪಿಎಲ್ನ ಮೊದಲ ಆವೃತ್ತಿಯಲ್ಲಿ, ಅನೇಕ ಪಾಕಿಸ್ತಾನಿ ಆಟಗಾರರು ಆಡಿದ್ದಾರೆ. ಆದರೆ, ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನಿ ಆಟಗಾರರನ್ನು ಐಪಿಎಲ್ನಲ್ಲಿ ಆಡುವುದನ್ನು ನಿಷೇಧಿಸಲಾಯಿತು. ಅಲ್ಲದೆ, ಭಾರತ ಮತ್ತು ಪಾಕ್ ನಡುವಿನ ದ್ವಿಪಕ್ಷೀಯ ಪಂದ್ಯಗಳನ್ನು ಸಹ ರದ್ದು ಮಾಡಲಾಗಿದೆ. ಇದೀಗ ಪಾಕಿಸ್ತಾನವು ತನ್ನದೇ ನೆಲದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೀನಾಯವಾಗಿ ಸೋಲುಂಡಿದೆ. ಸದ್ಯಕ್ಕೆ ಇಂಜಮಾಮ್ ಅವರು ತಂಡವನ್ನು ಬಲಪಡಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸೂಚಿಸಬೇಕಾಗಿತ್ತು. ಅದನ್ನು ಬಿಟ್ಟು ಐಪಿಎಲ್ ಮತ್ತು ಬಿಸಿಸಿಐ ವಿರುದ್ಧ ತಮ್ಮ ಕೋಪವನ್ನು ತೋರಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಇಂಜಮಾಮ್ ಅವರ ಹೇಳಿಕೆ ಇದೀಗ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ. (ಏಜೆನ್ಸೀಸ್)