ನಮ್ಮಲ್ಲಿ ಮುಖ್ಯವಾದುದ್ದು ಇಲ್ಲವೆಂದ ಪಿಸಿಬಿ; ಪಾಕ್​ ಕೈ ತಪ್ಪುತ್ತಾ ಚಾಂಪಿಯನ್ಸ್​ ಟ್ರೋಫಿ ಆತಿಥ್ಯ?

Champions Trophy
Published on

ನವದೆಹಲಿ: ಮುಂದಿನ ವರ್ಷ ಅಂದರೆ 2025ರಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಶುರುವಾಗುವುದಕ್ಕೆ ಹಲವು ತಿಂಗಳುಗಳು ಬಾಕಿ ಉಳಿದಿದ್ದು, ಟೂರ್ನಿ ಆರಂಭವಾಗುವುದಕ್ಕೂ ಮುಂಚಿನಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಏಕೆಂದರ ಈ ಬಾರಿಯ ಟೂರ್ನಿಯು ಹಾಲಿ ಚಾಂಪಿಯನ್ಸ್​ ಪಾಕಿಸ್ತಾನದ ನೆಲದಲ್ಲಿ ನಡೆಯುತ್ತಿದ್ದು, ಹಲವು ವರ್ಷಗಳ ಬಳಿಕ ಪಾಕ್​ ಐಸಿಸಿ ಟೂರ್ನಿಗೆ ಆತಿಥ್ಯ ವಹಿಸುತ್ತಿರುವುದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಇನ್ನೂ ಭದ್ರತೆಯ ಕಾರಣದಿಂದಾಗಿ ಭಾರತ ಭಾಗಿಯಾಗುವುದಿಲ್ಲ ಎಂದು ಹೇಳಿದೆ. ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಹೇಳಿರುವ ಬಿಸಿಸಿಐ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಎಂದು ಕಡ್ಡಿ ಮುರಿದಂತೆ ಹೇಳಿದೆ. ಐಸಿಸಿ ಕೂಡ ಬಿಸಿಸಿಐ ಬೆನ್ನಿಗೆ ನಿಂತಿದ್ದು, ಪಾಕಿಸ್ತಾನದ ಮಾತ್ರ ಹೈಬ್ರಿಡ್​ ಮಾದರಿಯಲ್ಲಿ ನಡೆಸಲು ತಯಾರಿಲ್ಲ ಎಂದು ತನ್ನ ನಿಲುವನ್ನು ತಿಳಿಸಿದೆ. ಇದರ ನಡುವೆ ಈಗ ಚಾಂಪಿಯನ್ಸ್​ ಟ್ರೋಫಿ ಆತಿಥ್ಯ ಪಾಕಿಸ್ತಾನದ ಕೈತಪ್ಪುವ ಭೀತಿ ಎದುರಾಗಿದ್ದು, ಈ ಬಗ್ಗೆ ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿದೆ.

ಏಕೆಂದರೆ ಪಂದ್ಯಗಳು ನಡೆಯಲಿರುವ ಲಾಹೋರ್​ನ ಗಡಾಫಿ ಸ್ಟೇಡಿಯಂ, ಕರಾಚಿಯ ನ್ಯಾಷನಲ್​ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಟೂರ್ನಿಯನ್ನು ಆಯೋಜಿಸಲು ಬೇಕಾದ ವ್ಯವಸ್ಥೆ ಸದ್ಯದ ಮಟ್ಟಿಗೆ ಇಲ್ಲದಿರುವುದು ಮತ್ತು ಅಲ್ಲಿನ ಅವ್ಯವಸ್ಥೆಯನ್ನು ಕಂಡು ದಾಂಗಾಗಿರುವ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಆತಿಥ್ಯ ಕೈತಪ್ಪುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ನಖ್ವಿ ನಮ್ಮ ಕ್ರೀಡಾಂಗಣಗಳು ಮತ್ತು ಪ್ರಪಂಚದ ಉಳಿದ ಕ್ರೀಡಾಂಗಣಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಯಾವುದೇ ರೀತಿಯಲ್ಲೂ ನಮ್ಮದು ಅಂತಾರಾಷ್ಟ್ರೀಯ ಕ್ರೀಡಾಂಗಣವಾಗಿ ಉಳಿದಿಲ್ಲ.ಎರಡು ಸ್ಟೇಡಿಯಂನಲ್ಲಿ ಸರಿಯಾದ ಆಸನ ವ್ಯವಸ್ಥೆಯೇ ಇಲ್ಲ. ಇನ್ನು ಬಾತ್​ರೂಮ್​ಗಳ ಬಗ್ಗೆ ಕೇಳುವಂತೆಯೇ ಇಲ್ಲ. ಒಂದು ಸ್ಟೇಡಿಯಂನಲ್ಲಿ ಇವರೆಡು ಬಹಳ ಮುಖ್ಯ. ಆದರೆ ಇದು ನಮ್ಮಲ್ಲಿಲ್ಲ. ಇನ್ನು ಸ್ಟೇಡಿಯಂನಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದಂತೆ 500 ಮೀಟರ್ ದೂರದಿಂದ ನೋಡಿದಂತಾಗುತ್ತದೆ. ಅಂದರೆ ಅಂತಾರಾಷ್ಟ್ರೀಯ ಸ್ಟೇಡಿಯಂಗೆ ಇರಬೇಕಾದ ಯಾವುದೇ ಮಾನದಂಡಗಳು ಇಲ್ಲಿಲ್ಲ.

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಾವು ನಮ್ಮ ಕ್ರೀಡಾಂಗಣಗಳನ್ನು ವಿಶ್ವದ ಅತ್ಯುತ್ತಮ ಕ್ರೀಡಾಂಗಣಗಳಲ್ಲಿ ಒಂದನ್ನಾಗಿ ಮಾಡಬೇಕಿದೆ. ಕ್ರೀಡಾಂಗಣಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ಮೂಲಕ ಸಕಲ ಸೌಲಭ್ಯಗಳೊಂದಿಗೆ ಟೂರ್ನಿಯನ್ನು ಆಯೋಜಿಸಲು ನಮ್ಮ ಸ್ಟೇಡಿಯಂಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಬೇಕಾದ ಅಗತ್ಯವಿದೆ ಎಂದು ಪಿಸಿಬಿ ಮುಖ್ಯಸ್ಥ ನಖ್ವಿ ಹೇಳಿದ್ದಾರೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪಿಸಿಬಿ ಅಧ್ಯಕ್ಷರು ಸ್ಥಳ ಪರಿಶೀಲಿಸಿದ ನಂತರ ಎರಡು ಕ್ರೀಡಾಂಗಣಗಳ ದುಸ್ಥಿತಿಯನ್ನು ಕಂಡು ಕಿಡಿಕಾರಿರುವ ನಖ್ವಿ ಸರ್ಕಾರದೊಂದಿಗೆ ಮಾತನಾಡಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರೀಡಾಂಗಣಗಳ ನವೀಕರಣಕ್ಕೆ ಮುಂದಾಗಿದ್ದಾರೆ. ಒಂದು ವೇಳೆ ಟೂರ್ನಿ ಬೇರೆಡೆಗೆ ಸ್ಥಳಾಂತರಗೊಂಡರೆ ಪಿಸಿಬಿಗೆ ಭಾರಿ ನಷ್ಟ ಎದುರಾಗುವ ಆತಂಕ ಎದುರಾಗಿದೆ. ಆದರೆ ಟೂರ್ನಿ ಪಾಕಿಸ್ತಾನದಲ್ಲೇ ನಡೆಯಲಿದೆ ಎಂದು ಪಿಸಿಬಿ ವಿಶ್ವಾಸ ವ್ಯಕ್ತಪಡಿಸಿದ್ದು, ಸರ್ಕಾರ ಹಾಗೂ ಭದ್ರತಾ ಏಜೆನ್ಸಿಗಳ ಜೊತೆ ಮಾತುಕತೆಯಲ್ಲಿ ತೊಡಗಿದೆ.

National Stadium

ಫೆಬ್ರವರಿ 19ರಂದು ಆರಂಭವಾಗಲಿರುವ ಈ ಟೂರ್ನಿಯು ಮಾರ್ಚ್​ 09ಕ್ಕೆ ಮುಕ್ತಾಯವಾಗಲಿದ್ದು, ಭಾರತ ತಂಡ ಭಾಗಿಯಾಗುವುದು ಡೌಟ್​​ ಎಂದು ಹೇಳಲಾಗಿದೆ. ಏಕೆಂದರೆ ಈ ಬಾರಿಯ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಲಿದ್ದು, ಪಾಕ್​ನಲ್ಲಿ ಟೂರ್ನಿ ಆಯೋಜನೆಗೊಳ್ಳುವುದಾದರೆ ಭಾರತ ತಂಡವು ಹಿಂದೆ ಸರಿಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಭಾರತ ಭಾಗಿಯಾಗಬೇಕೆಂದರೆ ಹೈಬ್ರಿಡ್​ ಮಾದರಿಯಲ್ಲಿ ಟೂರ್ನಿ ನಡೆಸುವಂತೆ ಬಿಸಿಸಿಐ ಮನವಿ ಮಾಡಿದೆ. ಒಂದು ವೇಳೆ ಪಿಸಿಬಿ ಇದಕ್ಕೆ ಒಪ್ಪಿದರೆ ಯುಎಇ ಅಥವಾ ಶ್ರೀಲಂಕಾದಲ್ಲಿ ಭಾರತದ ಪಂದ್ಯಗಳು ನಡೆಯಲಿವೆ.

ಆರ್ಥಿಕ ಸಂಕಷ್ಟದ ಭಯ

ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದ್ದು, ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾಗೆ ಇರುವ ಕ್ರೇಜ್​ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್​ ಮೇಲೆ ಇರುವ ಕಳಂಕವೂ ದೂರವಾಗಲಿದೆ ಎಂಬ ನಂಬಿಕೆಯಲ್ಲಿ ಅಲ್ಲಿನ ಕ್ರಿಕೆಟ್​ ಮಂಡಳಿ ಕಾದು ಕುಳಿತಿದೆ. ಅಲ್ಲದೇ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಕ್ರಿಕೆಟ್​ ಮೂಲಕ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಿಸಿಬಿ ನಿರೀಕ್ಷೆಗೆ ಬಿಸಿಸಿಐ ಆಘಾತ ನೀಡಿದ್ದು, ಬಹುತೇಕ ಟೀಮ್​ ಇಂಡಿಯಾ ಪಾಕಿಸ್ತಾನ ತೆರಳುವುದು ಅನುಮಾನವಾಗಿದೆ.

ಇದಲ್ಲದೆ ಭದ್ರತೆಯ ಕಾರಣದಿಂದಾಗಿ ಭಾರತದ ಪಂದ್ಯಗಳನ್ನು ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಸುವುದಾಗಿ ತಿಳಿಸಿದ್ದು, ಇದಕ್ಕಾಗಿ ಕ್ರೀಡಾಂಗಣದ ಪಕ್ಕದಲ್ಲಿರುವ ಐದು ಎಕರೆ ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಭಾರತದ ಆಟಗಾರರು ಹಾಗೂ ಸಿಬ್ಬಂದಿ ಉಳಿದುಕೊಳ್ಳಲು 5 ಸ್ಟಾರ್​ ಹೋಟೆಲ್​ ನಿರ್ಮಿಸುತಿವುದಾಗಿ ಪಿಸಿಬಿ ತಿಳಿಸಿದೆ. ಇದಲ್ಲದೆ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದರಿಂದ ಉಭಯ ದೇಶಗಳ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಸರಿಹೋಗಬಹುದು ಎಂದು ಪಿಸಿಬಿ ಆಶಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಭಾರತ ಸರ್ಕಾರ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net