

ಬೆಂಗಳೂರು: ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸ್ಸೇಜ್ ಮಾಡಿದ ಎಂಬ ಕಾರಣಕ್ಕೆ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಹತ್ಯೆ ಮಾಡಿ ಎರಡನೇ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ಗೆ ದಿನ ಕಳೆದಂತೆ ಒಂದಿಲ್ಲೊಂದು ಸಂಕಷ್ಟಗಳು ಎದುರಾಗುತ್ತಿದ್ದು, ಮನೆಯೂಟ ಕೋರಿ ನಟ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಸೆಪ್ಟೆಂಬರ್ 05ರಂದು ವಿಚಾರಣೆ ನಡೆಸುವುದಾಗಿ ಮುಂದೂಡಿದೆ.
ಆರೋಗ್ಯ ಸಮಸ್ಯೆಯ ಕಾರಣ ನೀಡಿ ನಟ ದರ್ಶನ್ ಮನೆಯೂಟ, ಹಾಸಿಗೆ ಹಾಗೂ ಕೆಲವು ಪುಸ್ತಕಗಳನ್ನು ನೀಡುವಂತೆ ಕೋರಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಜೈಲಧಿಕಾರಿಗಳಿಗೆ ವರದಿ ಸಲ್ಲಿಸುವಂತೆ ಏಕಸದಸ್ಯ ಪೀಠ ಸೂಚಿಸಿತ್ತು. ಅಂತೆಯೇ ನಿರ್ಧಾರವನ್ನು ಹೈಕೋರ್ಟ್ಗೆ ನೀಡಿದ್ದ ಜೈಲು ಅಧಿಕಾರಿಗಳು ಜೈಲು ಊಟ ಸಾಕೆಂದಿದ್ದರು. ಜೈಲಿನ ವೈದ್ಯಾಧಿಕಾರಿ ನೀಡಿದ್ದ ವರದಿಯನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವೈದ್ಯಾಧಿಕಾರಿಗಳು ದರ್ಶನ್ಗೆ ಮನೆ ಊಟವನ್ನು ನಿರಾಕರಿಸಿದ್ದಾರೆ ಎಂದು ಹೈಕೋರ್ಟ್ನಲ್ಲಿ ರಾಜ್ಯ ಅಭಿಯೋಜಕ ಬೆಳ್ಳಿಯಪ್ಪ ಹೇಳಿದರು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿರುವುದಾಗಿ ತಿಳಿಸಿದರು. ಆದರೆ ದರ್ಶನ್ ಪರ ವಕೀಲರು ವೈದ್ಯಾಧಿಕಾರಿಗಳ ವರದಿ ನೋಡಿ ವಾದಮಂಡನೆಗೆ ಸಮಯ ಬೇಕಾಗುತ್ತದೆಯಾದ್ದರಿಂದ ವಾದ ಮಂಡಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಅಂತೆಯೇ ನ್ಯಾಯಾಧೀಶರು ವಿಚಾರಣೆಯನ್ನು ಸೆಪ್ಟೆಂಬರ್ 5 ಕ್ಕೆ ಮುಂದೂಡಿದರು.
ಇತ್ತ ನಟ ದರ್ಶನ್ಗೆ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿರುವ ನಡುವೆಯೇ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಹಾಗೂ ಏಳನೇ ಆರೋಪಿ ಅನುಕುಮಾರ್ ಜಾಮೀನು ಕೋರಿ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಆಗಸ್ಟ್ 22ರಂದು ನಡೆಸಲಿದೆ.