ಒಂದೇ ಓವರ್​ನಲ್ಲಿ 39 ರನ್! ಸಿಕ್ಸರ್​ ಸರದಾರನ ದಾಖಲೆ ಪುಡಿಗಟ್ಟಿದ್ದ ಯುವ ಬ್ಯಾಟರ್​

darius visser
Published on

ನವದೆಹಲಿ: ಉದ್ಘಾಟನಾ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ 6 ಬಾಲ್​ಗೆ ಆರು ಸಿಕ್ಸರ್​ ಸಿಡಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದ ಯುವರಾಜ್​ ಸಿಂಗ್​ ಮಾಡಿರುವ ವರ್ಲ್ಡ್​ ರೆಕಾರ್ಡ್​ಅನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಆದರೆ, ಇದೀಗ ಆ ಮಾತನ್ನು ಸುಳ್ಳಾಗಿಸಿರುವ ಯುವ ಕ್ರಿಕೆಟಿಗನೋರ್ವ ಒಂದೇ ಓವರ್​ನಲ್ಲಿ 39 ರನ್​ ಸಿಡಿಸುವ ಮೂಲಕ ಯುವರಾಜ್​ ಸಿಂಗ್​ ಹೆಸರಿನಲ್ಲಿದ್ದ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.

ಈಸ್ಟ್ ಏಷ್ಯಾ-ಪೆಸಿಫಿಕ್ ಕ್ವಾಲಿಫೈಯರ್ ಪಂದ್ಯ ಇದಕ್ಕೆ ಸಾಕ್ಷಿಯಾಗಿದ್ದು, ಸಮೋಅ ತಂಡದ ಆಟಗಾರ ಡೇರಿಯಸ್ ವಿಸ್ಸರ್ ಒಂದೇ ಓವರ್​ನಲ್ಲಿ 39 ರನ್​ಗಳನ್ನು ಸಿಡಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಅಪಿಯಾದ ಗಾರ್ಡನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸಮೋಅ ಹಾಗೂ ವನವಾಟು ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಮೋಅ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಸಮೋಅ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 10 ರನ್​ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸಿಗಿಳಿದ  ಡೇರಿಯಸ್ ವಿಸ್ಸರ್ (132 ರನ್​, 62 ಎಸೆತ, 14 ಸಿಕ್ಸರ್, 05 ಬೌಂಡರಿ) ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಎದುರಾಳಿ ತಂಡದ ನಲಿನ್ ನಿಪಿಕೊ ಎಸೆದ 15ನೇ ಓವರ್​ನಲ್ಲಿ 39 ರನ್​ ಚಚ್ಚುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.

ಓವರ್​ನ ಮೊದಲ ಮೂರು ಎಸೆತಗಳನ್ನು ಸಿಕ್ಸರ್​ಗಟ್ಟಿದ ವಿಸ್ಸರ್, ನಾಲ್ನೇ ಬಾಲನ್ನು ಕೂಡ ಸಿಕ್ಸರ್​ಗಟ್ಟಿದ್ದರು. ಆ ಎಸೆತ ನೋಬಾಲ್​ ಆಗಿದ್ದರಿಂದ ಅದರ ಲಾಭ ಪಡೆದ ವಿಸ್ಸೆರ್​ ಮರು ಎಸೆತದಲ್ಲಿ ಮತ್ತೊಂದು ಸಿಕ್ಸ್. 5ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. 6ನೇ ಎಸೆತ ನೋ ಬಾಲ್, ಮತ್ತೊಂದು ಸಿಕ್ಸ್. ಮರು ಎಸೆತ ನೋ ಬಾಲ್. ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸ್. ಈ ಮೂಲಕ ಡೇರಿಯಸ್ ವಿಸ್ಸರ್ ಒಟ್ಟು 39 ರನ್​ ಕಲೆಹಾಕಿದ್ದರು.

ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಡೇರಿಯಸ್ ವಿಸ್ಸರ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿತ್ತು. 2007ರ ಟಿ20 ವಿಶ್ವಕಪ್​ನಲ್ಲಿ ಯುವಿ ಸ್ಟುವರ್ಟ್ ಬ್ರಾಡ್ ಓವರ್​ನಲ್ಲಿ 6 ಸಿಕ್ಸ್ ಬಾರಿಸಿ 36 ರನ್ ಗಳಿಸಿದ್ದರು. ಇದೀಗ 39 ರನ್​ಗಳೊಂದಿಗೆ ಡೇರಿಯಸ್ ವಿಸ್ಸರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net