ಟೀಮ್​ ಇಂಡಿಯಾ ಕೈಯಲ್ಲಿ ಸಾಧ್ಯವೇ ಇಲ್ಲ... ಈ ಬಾರಿ ಚಾಂಪಿಯನ್ಸ್​ ಟ್ರೋಫಿ ಗೆಲ್ಲುವ ತಂಡ ಇದಂತೆ! Champions Trophy 2025

Champions Trophy 2025
Published on

Champions Trophy 2025 : ಚಾಂಪಿಯನ್ಸ್ ಟ್ರೋಫಿ ಮುಂದಿನ ತಿಂಗಳು ಫೆಬ್ರವರಿ 19 ರಿಂದ ಆರಂಭವಾಗಲಿದೆ. ಪಾಕಿಸ್ತಾನ ಆತಿಥ್ಯ ವಹಿಸಲಿದೆ. ರಾಜಕೀಯ ಸಮಸ್ಯೆಗಳಿಂದಾಗಿ, ಟೀಮ್ ಇಂಡಿಯಾ ತನ್ನ ಎಲ್ಲ ಪಂದ್ಯಗಳನ್ನು ಯುಎಇಯಲ್ಲಿ ಆಡಲಿದೆ. ಇದರೊಂದಿಗೆ ಒಂದು ಸೆಮಿಫೈನಲ್ ಪಂದ್ಯವನ್ನು ಕೂಡ ಯುಎಇಯಲ್ಲಿಯೇ ನಡೆಸಲಾಗುತ್ತದೆ. ಆದರೆ, ಫೈನಲ್​ ಪಂದ್ಯಕ್ಕೆ ಇನ್ನೂ ಸ್ಥಳ ಅಂತಿಮಗೊಂಡಿಲ್ಲ. ಭಾರತ ಫೈನಲ್​ಗೆ ಪ್ರವೇಶಿಸಿದರೆ, ಆ ಪಂದ್ಯವನ್ನು ಯುಎಇಯಲ್ಲಿ ನಡೆಸಲಾಗುತ್ತದೆ. ಭಾರತ ಬಿಟ್ಟು ಬೇರೆ ಯಾವುದೇ ತಂಡಗಳು ಫೈನಲ್ ತಲುಪಿದರೆ, ಪಾಕಿಸ್ತಾನದಲ್ಲೇ ಆ ಪಂದ್ಯ ನಡೆಯಲಿದೆ.

ಸದ್ಯ ಚಾಂಪಿಯನ್ಸ್ ಟ್ರೋಫಿಗೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಕ್ರೀಡಾ ತಜ್ಞರು ಈ ಬಾರಿ ಚಾಂಪಿಯನ್ಸ್​ ಟ್ರೋಫಿ ಯಾರು ಗೆಲ್ತಾರೆ ಎಂದು ಊಹೆ ಮಾಡಲು ಆರಂಭಿಸಿದ್ದಾರೆ. ಇಂಗ್ಲೆಂಡ್‌ನ ಮಾಜಿ ಆಟಗಾರರಾದ ಮೈಕೆಲ್ ಅಥರ್ಟನ್ ಮತ್ತು ನಾಸರ್ ಹುಸೇನ್ ಇದೀಗ ತಮ್ಮ ಭವಿಷ್ಯವಾಣಿಗಳನ್ನು ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮೈಕೆಲ್ ಅಥರ್ಟನ್, ನಾನು ದಕ್ಷಿಣ ಆಫ್ರಿಕಾವನ್ನು ಬೆಂಬಲಿಸುತ್ತೇನೆ. ಅವರು ಪ್ರತಿ ಪಂದ್ಯಾವಳಿಯನ್ನು ಗೆಲ್ಲುವವರೆಗೂ ಹೋರಾಡುತ್ತಾರೆ. ಪ್ರಸ್ತುತ ದಕ್ಷಿಣ ಆಫ್ರಿಕಾ ತಂಡ ಬಲಿಷ್ಠವಾಗಿದೆ. ದಕ್ಷಿಣ ಆಫ್ರಿಕಾ ಈ ಬಾರಿ ಚಾಂಪಿಯನ್ಸ್​ ಟ್ರೋಫಿಯನ್ನು ಗೆಲ್ಲುತ್ತದೆ ಎಂದರು.

ಇಂಗ್ಲೆಂಡ್​ ತಂಡದ ಮಾಜಿ ನಾಯಕ ನಾಸರ್ ಹುಸೇನ್ ಮಾತನಾಡಿ, ಈ ಬಾರಿ ಭಾರತ ಮತ್ತು ಆಸ್ಟ್ರೇಲಿಯಾ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಹಂತವನ್ನು ತಲುಪುತ್ತವೆ. ಇಬ್ಬರಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲಿದೆ ಎಂದು ಹೇಳಿದರು.

ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಎರಡು ಬಾರಿ ಪ್ರಶಸ್ತಿ ಗೆದ್ದಿವೆ. 2000ರಲ್ಲಿ ಶ್ರೀಲಂಕಾ ಜೊತೆ ಜಂಟಿ ವಿಜೇತರಾಗಿದ್ದ ಭಾರತ, 2013 ರಲ್ಲಿ ಧೋನಿ ನಾಯಕತ್ವದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದಲ್ಲದೆ, ಆಸ್ಟ್ರೇಲಿಯಾ ತಂಡ ಎರಡು ಬಾರಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದಿದೆ. ಆಸ್ಟ್ರೇಲಿಯಾ ತಂಡವು 2006 ರಲ್ಲಿ ಮೊದಲ ಬಾರಿಗೆ ಮತ್ತು 2008 ರಲ್ಲಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net