ರೀಲ್ಸ್​​ ನೋಡುತ್ತಾ ಚಾಲನೆ: ಕಾರು ಕರೆಗೆ ಬಿದ್ದು ಚಾಲಕ ಸೇರಿ ಇಬ್ಬರ ದುರ್ಮರಣ | Reels

Reels
Published on

Reels : ಇದು ಸಾಮಾಜಿಕ ಜಾಲತಾಣಗಳ ಯುಗ. ಒಂದು ಹೊತ್ತು ಊಟವಿಲ್ಲದಿದ್ದರೂ ಪರವಾಗಿಲ್ಲ ಆದರೆ, ಸಾಮಾಜಿಕ ಜಾಲತಾಣದಲ್ಲಿ ಒಂದು ಸುತ್ತು ಹಾಕಿ ಬರಲೇಬೇಕು. ಕೈಯಲ್ಲಿ ಮೊಬೈಲ್ ಇದ್ದಾಗ ವಾಸ್ತವ ಜಗತ್ತನ್ನೇ ಮರೆತು, ಭ್ರಮಾ ಲೋಕದಲ್ಲಿ ಮುಳುಗಿರುತ್ತಾರೆ. ಎಲ್ಲ ಯುವಕರು ಮೊಬೈಲ್​ ಮೋಡಿಯಲ್ಲಿ ಬಿದ್ದಿದ್ದಾರೆ. ಒಮ್ಮೆ ಫೋನಿನಲ್ಲಿ ಮಗ್ನರಾದರೆ ಸಾಕು ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದೇ ತಿಳಿಯುವುದಿಲ್ಲ.

ಇತ್ತೀಚೆಗೆ, ರೀಲ್ಸ್ ನೋಡುವ ಹುಚ್ಚಿನಿಂದಾಗಿ ಚಾಲಕನೊಬ್ಬ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಲ್ಲದೆ, ಮತ್ತೊಬ್ಬನ ಜೀವವನ್ನು ಜತೆಗೆ ಕೊಂಡೊಯ್ದಿದ್ದಾನೆ. ಕಾರು ಕೆರೆಗೆ ಬಿದ್ದು ಇಬ್ಬರು ಸಾವಿಗೀಡಾಗಿದ್ದು, ಮತ್ತೊಬ್ಬ ವ್ಯಕ್ತಿ ಬಹಳ ಕಷ್ಟಪಟ್ಟು ಜೀವವನ್ನು ಉಳಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

ಕಳೆದ ಬುಧವಾರ (ಜ.15) ರಾತ್ರಿ ಭೋಪಾಲ್‌ನ ಕೋಲಾರ್​ ರಸ್ತೆಯಲ್ಲಿ ಕಾರು ಕೆರೆಗೆ ಉರುಳಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಪಲಾಶ್ ಗಾಯಕ್ವಾಡ್ ಮತ್ತು ವಿನೀತ್ ದಕ್ಷಾ (ಚಾಲಕ) ಎಂದು ಗುರುತಿಸಲಾಗಿದೆ.

ಚಾಲಕ ವಿನೀತ್​ ದಕ್ಷಾ ರೀಲ್ಸ್​ ನೋಡುತ್ತಾ ಕಾರನ್ನು ಚಾಲನೆ ಮಾಡುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಉರುಳಿತು. ಪರಿಣಾಮವಾಗಿ, ಪಲಾಶ್ ಮತ್ತು ವಿನೀತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಸಮಯದಲ್ಲಿ, ಪಿಯೂಷ್ ಎಂಬ ಮತ್ತೊಬ್ಬ ವ್ಯಕ್ತಿ ಕಾರಿನ ಹಿಂಭಾಗದ ಕಿಟಕಿಯನ್ನು ಒಡೆದು ಜೀವಂತವಾಗಿ ಪಾರಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಕೋಲಾರ್​ ಪೊಲೀಸರು ಸ್ಥಳಕ್ಕೆ ತಲುಪಿ, ಕಾರಿನ ಕಿಟಕಿಗಳನ್ನು ಒಡೆದು ಇಬ್ಬರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net