ಯುಎಸ್​ ಓಪನ್​ನಲ್ಲಿ ಎರಡು ಮಕ್ಕಳ ತಾಯಿ ವೋಜ್ನಿಯಾಕಿ ಶುಭಾರಂಭ

woz web
Published on

ನ್ಯೂಯಾರ್ಕ್​: ಮಾಜಿ ವಿಶ್ವ ನಂ. 1 ತಾರೆ ಕ್ಯಾರೊಲಿನ್​ ವೋಜ್ನಿಯಾಕಿ ಯುಎಸ್​ ಓಪನ್​ ಟೆನಿಸ್​ ಟೂರ್ನಿಯ ಮೊದಲ ಸುತ್ತಿನಲ್ಲಿ ರಷ್ಯಾದ ತತಿಯಾನಾ ಪ್ರೊಜೊರೋವಾ ವಿರುದ್ಧ 6-3, 6-2 ನೇರಸೆಟ್​ಗಳಿಂದ ಗೆದ್ದು ಗ್ರಾಂಡ್​ ಸ್ಲಾಂ ಟೆನಿಸ್​ಗೆ ಗೆಲುವಿನ ಪುನರಾಗಮನ ಕಂಡಿದ್ದಾರೆ.

2009 ಮತ್ತು 2014ರ ರನ್ನರ್​ಅಪ್​ ವೋಜ್ನಿಯಾಕಿ 2020ರಲ್ಲಿ ನಿವೃತ್ತಿ ಹೊಂದಿದ್ದರು. ಎರಡು ಮಕ್ಕಳಿಗೆ ಜನ್ಮ ನೀಡಿದ ಬಳಿಕ ಕಳೆದ ತಿಂಗಳಷ್ಟೇ ಅವರು ವೃತ್ತಿಪರ ಟೆನಿಸ್​ಗೆ ಮರಳಿದ್ದರು. ಮಾಜಿ ಎನ್​ಬಿಎ ಬಾಸ್ಕೆಟ್​ಬಾಲ್​ ಆಟಗಾರ ಡೇವಿಡ್​ ಲೀ ಜತೆ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ವೋಜ್ನಿಯಾಕಿ 2021ರ ಜೂನ್​ನಲ್ಲಿ ಪುತ್ರಿ ಒಲಿವಿಯಾಗೆ ಜನ್ಮ ನೀಡಿದ್ದರು. ನಂತರ 2022ರ ಅಕ್ಟೋಬರ್​ನಲ್ಲಿ 2ನೇ ಬಾರಿ ತಾಯಿಯಾಗಿದ್ದ ವೋಜ್ನಿಯಾಕಿ, ಪುತ್ರ ಜೇಮ್ಸ್​ಗೆ ಜನ್ಮ ನೀಡಿದ್ದರು.

33 ವರ್ಷದ ವೋಜ್ನಿಯಾಕಿಗೆ ಮುಂದಿನ ಸುತ್ತಿನಲ್ಲಿ ಜೆಕ್​ ಗಣರಾಜ್ಯದ ಅನುಭವಿ ಆಟಗಾರ್ತಿ ಪೆಟ್ರಾ ಕ್ವಿಟೋವಾ ಸವಾಲು ಎದುರಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net