

ಕಲ್ಕತ್ತಾ: ಭಾನುವಾರ(ನವೆಂಬರ್ 05)ರಂದು 35ನೇ ವಸಂತಕ್ಕೆ ಕಾಲಿಟ್ಟ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಸರಿಗಟ್ಟುವ ಮೂಲಕ ತಮ್ಮ ಜನ್ಮದಿನವನ್ನು ಸ್ಮರಣೀಯವಾಗಿರಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (CAB) ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ವಿರಾಟ್ ಕೊಹ್ಲಿಗೆ ಚಿನ್ನದ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಬ್ಯಾಟ್ ಮೇಲೆ ಹ್ಯಾಪಿ ಬರ್ತ್ಡೇ ವಿರಾಟ್ ಎಂದು ಬರೆಯಲಾಗಿದ್ದು, ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂಬುದಕ್ಕೆ ಜೀವಂತ ಸಾಕ್ಷಿ ನೀವೇ ಎಂದು ಉಡುಗೊರೆ ನೀಡಿರುವ ಬ್ಯಾಟ್ ಮೇಲೆ ಬರೆಸಲಾಗಿದೆ.
ಇದಾದ ಬಳಿಕ ತಮ್ಮ ಪ್ರತಿಮೆಯಂತಿದ್ದ ದೈತ್ಯ ಕೇಕ್ ಅನ್ನು ಕತ್ತರಿಸಿ ಕೊಹ್ಲಿ ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಬಳಿಕ ಮೈದಾನದ ಸಿಬ್ಬಂದಿ ಜತೆ ಫೋಟೋಗೆ ಪೋಸ್ ನೀಡಿದ್ದಾರೆ.
ಭಾರತದ ಪರ ಬ್ಯಾಟಿಂಗ್ ಮುಗಿಸಿ ವಿರಾಟ್ ಕೊಹ್ಲಿ ಡ್ಗೌಟ್ಗೆ ತೆಋಳುವ ವೇಳೆ ಬಾಲ್ಬಾಯ್ ಒಬ್ಬರು ವಿರಾಟ್ ಕೊಹ್ಲಿ ಪಾದ ಮುಟ್ಟಿ ನಮಸ್ಕರಿಸಿದ್ದು, ವಿರಾಟ್ ಪ್ರತಿಕ್ರಿಯೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆಗೆ ಪಾತ್ರವಾಇದೆ.
ಭಾನುವಾರ (ನವೆಂಬರ್ 05)ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ 49ನೇ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಹಾಲಿ ವಿಶ್ವಕಪ್ ಆವೃತ್ತಿಯಲ್ಲಿ ಭಾರತ ತನ್ನ 8ನೇ ಗೆಲುವನ್ನು ದಾಖಲಿಸಿದ್ದು, ತನ್ನ ಅಜೇಯ ಓಟವನ್ನು ಮುಂದುವರೆಸಿದೆ.