IND vs ENG: 3ನೇ ಏಕದಿನ ಪಂದ್ಯಕ್ಕೆ ಇವರಿಬ್ಬರನ್ನು ಕಣಕ್ಕಿಳಿಸಲ್ಲ! ತಂಡದಲ್ಲಿ ಈ ಬದಲಾವಣೆ ಬೇಕಿತ್ತು ಎಂದ ಸಂಜಯ್​ ಬಂಗಾರ್​

ವಿಜಯವಾಣಿ - 2025-02-11T182826.877
Published on

IND vs ENG: ಈಗಾಗಲೇ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಭಾರತ, ಮೂರನೇ ಮ್ಯಾಚ್​ ಗೆದ್ದು, ಆಂಗ್ಲರನ್ನು ಕ್ಲೀನ್ ಸ್ವೀಪ್ ಮಾಡಲು ಸನ್ನದ್ಧವಾಗಿದೆ. ಒಂದೆಡೆ ಟಿ20 ಮತ್ತು ಏಕದಿನ ಎರಡೂ ಸರಣಿಯನ್ನು ಗೆದ್ದಿರುವ ಭಾರತ, ಇದೇ ಫೆ.19ರಿಂದ ಪ್ರಾರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಎದುರುನೋಡುತ್ತಿದೆ. ಈ ಮಧ್ಯೆ ತಂಡದಲ್ಲಿ ಕೆಲವು ಬದಲಾವಣೆಗಳು ಕೇಳಿಬಂದಿವೆ.

ಕಳೆದ ಪಂದ್ಯದಲ್ಲಿ ಆಕರ್ಷಕ ಇನ್ನಿಂಗ್ಸ್ ನೀಡಿದ ಶುಭಮನ್ ಗಿಲ್​, ಶ್ರೇಯಸ್ ಅಯ್ಯರ್​ ಸೇರಿದಂತೆ ಒಂದಷ್ಟು ಆಟಗಾರರನ್ನು ಮೂರನೇ ಏಕದಿನ ಪಂದ್ಯದಿಂದ ಕೈಬಿಡಲು ಚಿಂತಿಸಿರುವ ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್,​ ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿರುವ ಭಾರತ ತಂಡದ ಆಟಗಾರರಿಗೆ ಅವಕಾಶ ಕೊಡಲು ಮುಂದಾಗಿದೆ. ಯಾರ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬುದು ನಾಳಿನ ಪಂದ್ಯದಲ್ಲಿ ಗೊತ್ತಾಗಲಿದೆ. ಇನ್ನು ಟೀಮ್ ಇಂಡಿಯಾದ ಇಬ್ಬರು ಆಟಗಾರರ ಬಗ್ಗೆ ಮಾತನಾಡಿರುವ ಮಾಜಿ ಆಟಗಾರ ಸಂಜಯ್ ಬಂಗಾರ್, ಮ್ಯಾನೇಜ್​ಮೆಂಟ್​ಗೆ ಒಂದು ಸಲಹೆ ನೀಡಿದ್ದಾರೆ.

ನಾಳೆ (ಫೆಬ್ರವರಿ 12) ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. "ಚಾಂಪಿಯನ್ಸ್ ಟ್ರೋಫಿ ಸಮೀಪಿಸುತ್ತಿರುವ ಬೆನ್ನಲ್ಲೇ ಇದು ಕಡೆಯ ಏಕದಿನ ಪಂದ್ಯವಾಗಿರುವುದರಿಂದ ಭಾರತ ತಂಡದಲ್ಲಿ ಹೆಚ್ಚು ಬದಲಾವಣೆಗಳು ಆಗುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ಹೀಗಿರುವಾಗ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್​ಗೆ ಅವಕಾಶ ಸಿಗುವುದು ಬಹುತೇಕ ಅನುಮಾನ" ಎಂದರು.

"ನನ್ನ ಪ್ರಕಾರ, ಮ್ಯಾನೇಜ್​ಮೆಂಟ್​ ನಿರ್ಧಾರದಂತೆ ಕೆ.ಎಲ್. ರಾಹುಲ್ ವಿಕೆಟ್ ಕೀಪರ್ ಆಗಿ ಮುಂದುವರೆದರೆ, ಶುಭಮನ್ ಗಿಲ್ ಆರಂಭಿಕ ಆಟಗಾರನಾಗಿ ಮುಂದುವರಿಯಲಿದ್ದಾರೆ. ಇದುವರೆಗಿನ ಎರಡು ಏಕದಿನ ಪಂದ್ಯಗಳಲ್ಲಿ ತಂಡದಿಂದ ಹೊರಗುಳಿದಿರುವ ಅರ್ಷ್​ದೀಪ್ ಸಿಂಗ್‌ರನ್ನು ಮೊಹಮ್ಮದ್ ಶಮಿ ಜಾಗಕ್ಕೆ ಕರೆತರಬೇಕು ಎಂಬುದು ನನ್ನ ಸಲಹೆ" ಎಂದು ಬಂಗಾರ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net