ಸಹೋದರಿಯ ಅರಿಶಿಣ ಶಾಸ್ತ್ರದಲ್ಲಿ ಡ್ಯಾನ್ಸ್ ಮಾಡುವಾಗ Heart Attack; ಯುವತಿ ಸಾವು, ವಿಡಿಯೋ ವೈರಲ್​

VidiSha Heart Attack
Published on

ಭೋಪಾಲ್​: ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಜನರನ್ನು ಹೆಚ್ಚು ಬಾಧಿಸುತ್ತಿದ್ದು, ವಯಸ್ಸಿನ ಅಂತರವಿಲ್ಲದೇ ಜನರು ಹೃದಯಾಘಾತಕ್ಕೆ (Heart Attack) ಬಲಿಯಾಗುತ್ತಿರುವುದು ಕಳವಳಕಾರಿಯಾಗಿದೆ. ಇದೀಗ ಯುವತಿಯೊಬ್ಬರು ತಮ್ಮ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯು ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದ್ದು, ಮೃತರನ್ನು 23 ವರ್ಷದ ಯುವತಿ ಪರಿಣಿತಾ ಜೈನ್ ಎಂದು ಗುರುತಿಸಲಾಗಿದೆ. ಈಕೆ ಹೃದಯಾಘಾತದಿಂದ (Heart Attack) ವೇದಿಕೆ ಮೇಲೆ ಕುಸಿದು ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗದಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಸೀರೆಯುಟ್ಟಿರುವ ಯುವತಿ ಪರಿಣಿತಾ ಜೈನ್ ಹಿಂದಿಯ ಲೆಹ್ರಾ ಕೆ ಬಲ್ಖಾ ಕೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದು, ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದಿದ್ದಾಳೆ. ಕೂಡಲೇ ಇದನ್ನು ಗಮನಿಸಿದ ಸಂಬಂಧಿಕರು ಆಕೆಗೆ ಸಿಪಿಆರ್ ನೀಡಿದ್ದಾರೆ. ಆದರೆ, ಯುವತಿ ಪ್ರತಿಕ್ರಿಯಿಸದಿದ್ದಾಗ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ವೈದ್ಯರು ಹೃದಯಾಘಾತದಿಂದ (Heart Attack) ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಪೊಲೀಸ್​ ಅಧಿಕಾರಿಯೊಬ್ಬರು,  ಮೃತ ಪರಿಣಿತಾ ಎಂಬಿಎ ಪದವಿಧರೆಯಾಗಿದ್ದು, ತನ್ನ ಪೋಷಕರೊಂದಿಗೆ ಇಂದೋರ್​ನಲ್ಲಿ ವಾಸಿಸುತ್ತಿದ್ದರು, ಸಹೋದರಿ ಮದುವೆ ಕಾರ್ಯದ ನಿಮಿತ್ತ ವಿಧಿಶಾಗೆ ಆಗಮಿಸಿದ್ದರು. ಹಲ್ದಿ ಸಮಾರಂಭದ ದಿನ ನೃತ್ಯ ಮಾಡುತ್ತಿದ್ದಾಗ ಪರಿಣಿತಾ ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದು, ಹೃದಯಾಘಾತವಾಗಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net