

ಮೈಸೂರು: ಸ್ಯಾಂಡಲ್‌ವುಡ್‌ನ ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವ ನಟ ಡಾಲಿ ಧನಂಜಯ್ (Daali Dhananjaya) ಇದೇ ಫೆಬ್ರವರಿ 16ರಂದು ವೈದ್ಯೆ ಧನ್ಯತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಮದುವೆ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ನಟ ಧನಂಜಯ್ ಅವರು ಚಿತ್ರರಂಗ, ರಾಜಕೀಯ, ಕ್ರೀಡೆ, ಅಭಿಮಾನಿಗಳು ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಈ ಬಗೆಗಿನ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೀಗ ಮದುವೆಗೆ ಸಂಬಂಧಿಸಿದಂತೆ ನಟ ಡಾಲಿ ಧನಂಜಯ್ (Daali Dhananjaya) ಅವರು ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ್ದು, ಮದುವೆ ಕಾರ್ಯಗಳಿಗೆ ಸಂಬಂಧಿಸಿದ ಹಾಗೂ ನಟ ದರ್ಶನ್ ಆಹ್ವಾನಿಸಿರುವ ಕುರಿತು ಮಾಹಿತಿ ನೀಡಿದ್ದಾರೆ.
ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಈ ಸಂಬಂಧ ಮಾತನಾಡಿದ ನಟ ಧನಂಜಯ್ (Dhananjay), ಮದುವೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೈಸೂರಿನಲ್ಲೇ ಮದುವೆ ಆಗಬೇಕು ಎನ್ನುವುದು ನಮ್ಮ ಕನಸು. ನನ್ನ ವಿದ್ಯಾಭ್ಯಾಸ, ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಎಲ್ಲವೂ ಮೈಸೂರಿನಿಂದಲೇ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸಿಗಲಿ ಎಂದು ಇಲ್ಲೇ ಮದುವೆಯಾಗುತ್ತಿದ್ದೇನೆ. ಅಭಿಮಾನಿಗಳಿಗೆ ಮುಕ್ತ ಅವಕಾಶ ನೀಡಿದ್ದೇವೆ. ಎಲ್ಲರೂ ನೇರವಾಗಿ ಬಂದು ನನಗೆ ಆಶೀರ್ವಾದ ಮಾಡಿ ಹೋಗಬಹುದು. ವಿದ್ಯಾಪತಿ ದ್ವಾರದ ಮೂಲಕ ಅಭಿಮಾನಿಗಳಿಗೆ ಪ್ರವೇಶ ಇರುತ್ತದೆ. ಚಿತ್ರರಂಗ, ರಾಜಕೀಯ ನಾಯಕರು ಎಲ್ಲರನ್ನ ಮದುವೆಗೆ ಕರೆದಿದ್ದೇನೆ. ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂಬುದು ನಮ್ಮ ಬಯಕೆ. ಅಹ್ವಾನ ನೀಡಿರುವ ಎಲ್ಲರೂ ಬರ್ತಾರೆ ಎಂಬ ನಿರೀಕ್ಷೆ ಇದೆ.
ನನಗೆ ಮಂತ್ರಮಾಂಗಲ್ಯ, ವಚನ ಮಾಂಗಲ್ಯ, ರಿಜಿಸ್ಟರ್ ಮದುವೆ ಆಗುವ ಆಸೆ ಇತ್ತು. ನಮ್ಮ ಕುಟುಂಬ ಸದಸ್ಯರು, ಚಿತ್ರರಂಗ, ಸ್ನೇಹಿತರು ಎಲ್ಲರಿಗೂ ಊಟ ಹಾಕಿಸಬೇಕು. ಹೀಗಾಗಿ, ಒಂದೇ ವೇದಿಕೆಯಲ್ಲಿ ಎಲ್ಲರಿಗೂ ಊಟ ಹಾಕಿ ಆಶೀರ್ವಾದ ಪಡೆಯೋಣ ಎಂಬ ಆಸೆಯಿಂದ ಇಲ್ಲಿ ಮದುವೆ ಆಗುತ್ತಿದ್ದೇವೆ. ಚಾಮುಂಡೇಶ್ವರಿ ದೇವಾಲಯ ಮಾದರಿಯಲ್ಲಿ ವೇದಿಕೆ ನಿರ್ಮಾಣ ಆಗುತ್ತಿದೆ. ದಕ್ಷಿಣ ಭಾರತದ ಮಾದರಿಯ ಊಟದ ವ್ಯವಸ್ಥೆ ಇದೆ. ಅಭಿಮಾನಿಗಳು, ವಿಐಪಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲರಿಗೂ ಒಂದೇ ಮಾದರಿಯ ಊಟ ಇರುತ್ತದೆ. ಆದರೆ, ವಿಐಪಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಮದುವೆಗೆ ಬಂದು ಹಾರೈಸಿ ಎಂದು ಆಹ್ವಾನಿಸಿದ್ದಾರೆ.
ಇನ್ನೂ ನಟ ದರ್ಶನ್ರನ್ನು ಆಹ್ವಾನಿಸದಿರುವ ಕುರಿತು ಪ್ರತಿಕ್ರಿಯಿಸಿ, ನನ್ನ ಮದುವೆಗೆ ದರ್ಶನ್ ರವರು ಬಂದ್ರೆ ನನಗೆ ತುಂಬಾ ಸಂತೋಷ. ಈಗಿನ ಪರಿಸ್ಥಿಯಲ್ಲಿ ಅವರನ್ನ ಭೇಟಿ ಮಾಡಲು ಆಗುತ್ತಿಲ್ಲ. ಕನ್ನಡ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇನೆ. ದರ್ಶನ್ ರವರನ್ನ ಕರೆಯಲು ಪ್ರಯತ್ನ ಮಾಡುತ್ತಿದ್ದೇನೆ. ದರ್ಶನ್ ಅವರು ಸಿಗುತ್ತಿಲ್ಲ. ಖಂಡಿತವಾಗಿ ದರ್ಶನ್ ಅವರು ನನ್ನ ಮದುವೆಗೆ ಬಂದರೆ ನನಗೆ ಸಂತೋಷ ಎಂದು ನಟ ಡಾಲಿ ಧನಂಜಯ್ (Daali Dhananjaya) ಪ್ರತಿಕ್ರಿಯಿಸಿದ್ದಾರೆ.