

ಮಾಲೆ (ಮಾಲ್ಡೀವ್ಸ್): ಸುನೀಲ್ ಛೇಟ್ರಿ ಸಾರಥ್ಯದ ಬೆಂಗಳೂರು ಎಫ್ಸಿ ತಂಡ ಹಾಲಿ ಫುಟ್‌ಬಾಲ್ ಋತುವಿನ ಮೊದಲ ಸವಾಲಿಗೆ ಸಜ್ಜಾಗಿದೆ. ಎಎಫ್ಸಿ ಕಪ್ ಟೂರ್ನಿಯ ಪ್ಲೇಆಫ್ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ತಂಡ ಭಾನುವಾರ ಆತಿಥೇಯ ಮಾಲ್ಡೀವ್ಸ್‌ನ ಕ್ಲಬ್ ಈಗಲ್ಸ್ ತಂಡವನ್ನು ಎದುರಿಸಲಿದೆ.
ಕಳೆದ ಮೇನಲ್ಲಿ ನಡೆಯಬೇಕಾಗಿದ್ದ ಈ ಪಂದ್ಯ ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ಮುಂದೂಡಲ್ಪಟ್ಟಿತ್ತು. ಈ ಪಂದ್ಯದಲ್ಲಿ ಗೆದ್ದ ತಂಡ ಎಎಫ್ಸಿ ಕಪ್ ಪ್ರಧಾನ ಸುತ್ತಿನ ಡಿ ಗುಂಪಿನಲ್ಲಿ ಸ್ಥಾನ ಸಂಪಾದಿಸಲಿದೆ. ಈ ಗುಂಪಿನಲ್ಲಿ ಈಗಾಗಲೆ ಭಾರತದ ಮತ್ತೊಂದು ತಂಡ ಎಟಿಕೆ ಮೋಹನ್ ಬಾಗನ್, ಬಶುಂಧರ ಕಿಂಗ್ಸ್ (ಬಾಂಗ್ಲಾದೇಶ), ಮೈಜಿಯಾ ಸ್ಪೋರ್ಟ್ಸ್ (ಮಾಲ್ಡೀವ್ಸ್) ತಂಡಗಳಿವೆ.
ಬಿಎಫ್ಸಿ ತಂಡ ಕಳೆದ ಏಪ್ರಿಲ್‌ನಲ್ಲಿ ಟೂರ್ನಿಯ ಪ್ರಾಥಮಿಕ ಸುತ್ತಿನಲ್ಲಿ ನೇಪಾಳದ ತ್ರಿಭುವನ್ ಆರ್ಮಿ ತಂಡವನ್ನು 5-0 ಅಂತರದಿಂದ ಪರಾಭವಗೊಳಿಸಿದ್ದರೆ, ಕ್ಲಬ್ ಈಗಲ್ಸ್ ತಂಡ ಭೂತಾನ್‌ನ ಥಿಂಪು ಎಫ್ಸಿ ತಂಡವನ್ನು 2-0ಯಿಂದ ಸೋಲಿಸಿ ಈ ಪಂದ್ಯಕ್ಕೆ ಅರ್ಹತೆ ಪಡೆದಿತ್ತು.
ಮುಖ್ಯ ಕೋಚ್ ಮಾರ್ಕೋ ಪೆಜೋಲಿ ಮಾರ್ಗದರ್ಶನದ ಬಿಎಫ್ಸಿ ತಂಡ ಈ ಬಾರಿ ರೋಹಿತ್ ಕುಮಾರ್, ಹರ್ಮಾನ್‌ಪ್ರೀತ್ ಸಿಂಗ್, ವಿದ್ಯಾಸಾಗರ್ ಸಿಂಗ್, ಜಯೇಶ್ ರಾಣೆ, ಡ್ಯಾನಿಶ್ ಫಾರೂಖ್ ಮತ್ತು ಸಾರ್ಥಕ್ ಗೋಲುಯಿ ಅವರಂಥ ಹೊಸ ಆಟಗಾರರಿಂದ ಕೂಡಿದೆ. ಕಳೆದ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ನೀರಸ ನಿರ್ವಹಣೆ ತೋರಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಬಿಎಫ್ಸಿ ತಂಡಕ್ಕೆ ಈ ಹಿಂದಿನ ನಿರ್ವಹಣೆಗಳು ಸ್ಫೂರ್ತಿಯಾಗಿವೆ.
ಕ್ಲಬ್ ಈಗಲ್ಸ್ ತಂಡ ತನ್ನ ಪ್ರಮುಖ ಆಟಗಾರ ಅಹ್ಮದ್ ರಿಜ್ವಾನ್ ಅವರ ಅನುಪಸ್ಥಿತಿಯ ಹಿನ್ನಡೆ ಹೊಂದಿದೆ. ಗಾಯದಿಂದಾಗಿ ಅವರು ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಈಗಲ್ಸ್ ಕೋಚ್ ಮೊಹಮದ್ ಶಾಜ್ಲಿ ಖಚಿತಪಡಿಸಿದ್ದಾರೆ. ಆದರೆ ಅಲಿ ಅಶ್ಫಕ್, ಅಕ್ರಮ್ ಅಬ್ದುಲ್ ಘನೀ, ಅಲಿ ಸಿರ್, ಮೊಹಮದ್ ಆರೀಫ್, ಇಸ್ಮಾಯಿನ್ ಎಸಾ, ಅಹ್ಮದ್ ಹಸನ್, ಮೊಹಮದ್ ಪೈಸಲ್ ಅವರಂಥ ಅನುಭವಿ ಆಟಗಾರರ ಬಲ ಆತಿಥೇಯ ತಂಡಕ್ಕಿದೆ.
ಈ ಪಂದ್ಯದಲ್ಲಿ ಗೆದ್ದ ತಂಡ ಡಿ ಗುಂಪಿನ ಮೊದಲ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ತಂಡವನ್ನು ಎದುರಿಸಲಿದೆ. ರೌಂಡ್ ರಾಬಿನ್ ಲೀಗ್ ಬಳಿಕ ಡಿ ಗುಂಪಿನ ಅಗ್ರ ತಂಡ ಅಂತರ ವಲಯ ಸೆಮಿಫೈನಲ್ಸ್‌ಗೇರಲಿದ್ದು, ಕೇಂದ್ರ ವಲಯದ ಎಫ್ಸಿ ನಸ್ (ಉಜ್ಬೇಕಿಸ್ತಾನ) ಅಥವಾ ಎಫ್ಸಿ ಅಹಲ್ (ತುರ್ಕ್‌ಮೆನಿಸ್ತಾನ) ತಂಡವನ್ನು ಎದುರಿಸಲಿದೆ.
*ಆರಂಭ: ರಾತ್ರಿ 8.30