ಜಮೈಕಾ ಅಥ್ಲೀಟ್ ಚಿನ್ನದ ಪದಕ ಗೆಲುವಿಗೆ ನೆರವಾದ ಒಲಿಂಪಿಕ್ಸ್ ಸ್ವಯಂಸೇವಕಿ!

volunteer jamaica web
Published on

ಟೋಕಿಯೊ: ಜಮೈಕಾದ ಅಥ್ಲೀಟ್ ಹನ್‌ಸ್ಲೆ ಪರ್ಚ್‌ಮೆಂಟ್ ಟೋಕಿಯೊ ಒಲಿಂಪಿಕ್ಸ್‌ನ 110 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಜಯಿಸಿ ಬೀಗಿದ್ದರು. ಅವರ ಈ ಸಾಧನೆಯ ಹಿಂದೆ ಒಲಿಂಪಿಕ್ಸ್ ಕ್ರೀಡಾಕೂಟದ ವೇಳೆ ಸ್ವಯಂಸೇವಕಿಯಾಗಿ ಕಾರ್ಯನಿರ್ವಹಿಸಿದ್ದ ಮಹಿಳೆಯೊಬ್ಬರ ಮಹತ್ವದ ಪಾತ್ರವಿರುವುದು ಇದೀಗ ಬೆಳಕಿಗೆ ಬಂದಿದೆ. ಸ್ವತಃ ಪರ್ಚ್‌ಮೆಂಟ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಈ ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

110 ಮೀ. ಹರ್ಡಲ್ಸ್ ಸ್ಪರ್ಧೆಯ ಸೆಮಿಫೈನಲ್ಸ್ ಸ್ಪರ್ಧೆ ನಡೆದ ದಿನ ಪರ್ಚ್‌ಮೆಂಟ್ ಅವರು ಒಲಿಂಪಿಕ್ಸ್ ಸ್ಟೇಡಿಯಂಗೆ ತೆರಳುವ ಸಲುವಾಗಿ ಕ್ರೀಡಾಗ್ರಾಮದಿಂದ ಬಸ್ ಒಂದನ್ನು ಹತ್ತಿದ್ದರು. ಸಂಗೀತಾ ಕೇಳುತ್ತ ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ಬಸ್ ಹತ್ತಿ ಕುಳಿತಿದ್ದರು. ಹೀಗಾಗಿ ಬಸ್‌ನಲ್ಲಿ ಬರುತ್ತಿದ್ದ ಘೋಷಣೆಗಳು ಅವರ ಕಿವಿಗೆ ಕೇಳಿಸುತ್ತಿರಲಿಲ್ಲ. ಆದರೆ ಬಸ್ ಹೊರಟು ತಿರುವು ಪಡೆದಾಗ ಅವರಿಗೆ ತಾನು ತಪ್ಪಾದ ಬಸ್ ಹತ್ತಿರುವುದು ಗಮನಕ್ಕೆ ಬಂದಿತು. ಈಜು ಸ್ಪರ್ಧೆ ನಡೆಯುತ್ತಿದ್ದ ತಾಣದತ್ತ ಹೊರಟಿದ್ದ ಆ ಬಸ್ ಅಷ್ಟರಲ್ಲಾಗಲೇ ಸಾಕಷ್ಟು ದೂರ ಬಂದಿತ್ತು. ಹೀಗಾಗಿ ಅವರು ಬಸ್‌ನಿಂದ ಇಳಿದು ಅಥ್ಲೆಟಿಕ್ಸ್ ಸ್ಪರ್ಧೆ ನಡೆಯುತ್ತಿದ್ದ ಒಲಿಂಪಿಕ್ ಕ್ರೀಡಾಂಗಣದತ್ತ ಹೇಗೆ ಹೋಗುವುದು ಎಂದು ತಲೆಕೆಡಿಸಿಕೊಳ್ಳಲಾರಂಭಿಸಿದ್ದರು.

ಕ್ರೀಡಾಗ್ರಾಮಕ್ಕೆ ಮರಳಿ ಸರಿಯಾದ ಬಸ್ ಏರುವಷ್ಟು ಸಮಯ ಅವರ ಬಳಿ ಇರಲಿಲ್ಲ. ಹೀಗಾಗಿ ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಸ್ಪರ್ಧೆಗೆ ಸರಿಯಾದ ಸಮಯಕ್ಕೆ ತಲುಪುವ ಸಲುವಾಗಿ ಪರ್ಚ್‌ಮೆಂಟ್, ಅಲ್ಲೇ ಇದ್ದ ಸ್ವಯಂಸೇವಕಿಯ ನೆರವು ಕೋರಿದರು. ಆ ಸ್ವಯಂಸೇವಕಿಗೆ ಪರ್ಚ್‌ಮೆಂಟ್ ಪರಿಸ್ಥಿತಿ ಅರ್ಥವಾದರೂ, ಹೆಚ್ಚಿನ ಸಹಾಯ ಮಾಡುವ ಸ್ಥಿತಿಯಲ್ಲಿ ಆಕೆಯೂ ಇರಲಿಲ್ಲ. ಹೀಗಾಗಿ ಸ್ವಲ್ಪ ಹಣ ನೀಡಿದ್ದ ಆ ಸ್ವಯಂಸೇವಕಿ ಟ್ಯಾಕ್ಸಿ ಮಾಡಿಕೊಂಡು ಕ್ರೀಡಾಂಗಣ ತಲುಪುವಂತೆ ಸಲಹೆ ನೀಡಿದರು. ಅದರಂತೆ ಆ ಹಣ ಪಡೆದು ಟ್ಯಾಕ್ಸಿ ಏರಿದ ಪರ್ಚ್‌ಮೆಂಟ್ ಸರಿಯಾದ ಸಮಯಕ್ಕೆ ತಲುಪಿದ್ದು ಮಾತ್ರವಲ್ಲದೆ, ಅಭ್ಯಾಸಕ್ಕೂ ಅವರಿಗೆ ಸ್ವಲ್ಪ ಸಮಯ ಲಭಿಸಿತು. ಬಳಿಕ ಫೈನಲ್ಸ್‌ಗೇರುವಲ್ಲಿ ಸಫಲರಾಗಿದ್ದ ಪರ್ಚ್‌ಮೆಂಟ್, ವಿಶ್ವ ಚಾಂಪಿಯನ್ ಗ್ರಾಂಟ್ ಹಲೋವೇಗೆ ಆಘಾತ ನೀಡಿ ಸ್ವರ್ಣ ಪದಕ ಗೆದ್ದಿದ್ದರು.

ಚಿನ್ನದ ಪದಕ ಗೆಲುವಿನ ಬಳಿಕವೂ ಆ ಸ್ವಯಂಸೇವಕಿಯ ಸಹಾಯವನ್ನು ಮರೆಯದ ಪರ್ಚ್‌ಮೆಂಟ್, ಆಕೆಯನ್ನು ಹುಡುಕಿಕೊಂಡು ಹೋಗಿ ತಾನು ಗೆದ್ದ ಚಿನ್ನದ ಪದಕವನ್ನು ಪ್ರದರ್ಶಿಸಿದರು. ಅಲ್ಲದೆ ಆಕೆಗೆ ಟಿ-ಶರ್ಟ್ ಒಂದನ್ನು ಉಡುಗೊರೆಯಾಗಿ ನೀಡಿದರು. ಜತೆಗೆ ಆಕೆ ನೀಡಿದ್ದ ಹಣವನ್ನೂ ಮರಳಿಸಿದರು. ಆಕೆಯನ್ನು ಮತ್ತೆ ಭೇಟಿಯಾದ ಆ ಕ್ಷಣದ ವಿಡಿಯೋವನ್ನು ಪರ್ಚ್‌ಮೆಂಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜಪಾನ್‌ನ ಆ ಸ್ವಯಂಸೇವಕಿ ಮಾಡಿದ ಸಹಾಯದ ಬಗ್ಗೆ ಸಂತೋಷಗೊಂಡಿರುವ ಜಮೈಕಾದ ಪ್ರವಾಸೋದ್ಯಮ ಸಚಿವ ಎಡ್ಮಂಡ್ ಬರ್ಟ್‌ಲೆಟ್, ಆಕೆಯನ್ನು ಕೆರಿಬಿಯನ್ ದೇಶಗಳಿಗೆ ಪ್ರವಾಸಕ್ಕೆ ಬರುವಂತೆಯೂ ಸ್ವಾಗತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net