PHOTO | ಪ್ಯಾರಿಸ್‌ನಲ್ಲಿ ಮೆಸ್ಸಿಗೆ ಐಷಾರಾಮಿ ಹೋಟೆಲ್ ರೂಂ, ದಿನದ ಬಾಡಿಗೆ 17.5 ಲಕ್ಷ ರೂ!

messi web
Published on

ಪ್ಯಾರಿಸ್: ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಇತ್ತೀಚೆಗೆ ಬಾರ್ಸಿಲೋನಾ ತಂಡವನ್ನು ತ್ಯಜಿಸಿ ಫ್ರಾನ್ಸ್‌ನ ಪ್ಯಾರಿಸ್ ಸೇಂಟ್-ಜರ್ಮೈನ್ (ಪಿಎಸ್‌ಜಿ) ಕ್ಲಬ್‌ಗೆ ಸೇರ್ಪಡೆಯಾಗಿದ್ದರು. ಪ್ಯಾರಿಸ್‌ನಲ್ಲಿ ಮೆಸ್ಸಿ, ಅವರ ಪತ್ನಿ ಆಂಟೊನೆಲೊ ಮತ್ತು ಮೂವರು ಮಕ್ಕಳು ಉಳಿದುಕೊಳ್ಳಲು ಪಿಎಸ್‌ಜಿ ಕ್ಲಬ್ ಐಷಾರಾಮಿ ಹೋಟೆಲ್ ವ್ಯವಸ್ಥೆ ಮಾಡಿದೆ.

34 ವರ್ಷದ ಮೆಸ್ಸಿ ವಾಸ್ತವ್ಯ ಹೂಡಿರುವ ಈ ಪಂಚತಾರಾ ಹೋಟೆಲ್ ಕೊಠಡಿಗೆ ಒಂದು ರಾತ್ರಿಗೆ 17.5 ಲಕ್ಷ ರೂಪಾಯಿ (20 ಸಾವಿರ ಯುರೋ) ಬಾಡಿಗೆ ಇದೆ ಎನ್ನಲಾಗಿದೆ. ‘ಲೆ ರಾಯಲ್ ಮೊನ್‌ಸೆವು’ ಹೆಸರಿನ ಈ ಹೋಟೆಲ್ ಈಜುಕೊಳ, ಸಿನಿಮಾ ಹಾಲ್ ಮತ್ತು ಫ್ರಾನ್ಸ್‌ನ ಅತ್ಯುತ್ತಮ ಆಹಾರ ಸೇವೆ ಹೊಂದಿರುವ ಕೆಲ ರೆಸ್ಟೋರೆಂಟ್‌ಗಳನ್ನೂ ಒಳಗೊಂಡಿದೆ. ಈ ಐಷಾರಾಮಿ ಹೋಟೆಲ್‌ನ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ.

ಪ್ಯಾರಿಸ್‌ನ ಅತ್ಯಂತ ಪ್ರತಿಷ್ಠಿತ ಪ್ರದೇಶದಲ್ಲಿರುವ ಈ ಹೋಟೆಲ್‌ನಿಂದ ಅಪೂರ್ವ ದೃಶ್ಯಗಳನ್ನು ಕಾಣಬಹುದಾಗಿದೆ. ಬ್ರೆಜಿಲ್ ತಾರೆ ನೇಮರ್ ಕೂಡ 2017ರಲ್ಲಿ ಪಿಎಸ್‌ಜಿ ತಂಡಕ್ಕೆ ವರ್ಗಾವಣೆಗೊಂಡ ಆರಂಭದಲ್ಲಿ ಇದೇ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಬಳಿಕ ಅವರಿಗೆ ಪ್ಯಾರಿಸ್‌ನಲ್ಲಿ ಮನೆಯ ವ್ಯವಸ್ಥೆ ಮಾಡಲಾಗಿತ್ತು. ಮೆಸ್ಸಿ ಕೂಡ ಮುಂದಿನ ದಿನಗಳಲ್ಲಿ ಅದೇ ರೀತಿ ಸುಸಜ್ಜಿತ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ ಎನ್ನಲಾಗಿದೆ.

ಮೆಸ್ಸಿ ಪಿಎಸ್‌ಜಿ ಜತೆಗೆ 2 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, ಬೋನಸ್ ಸಹಿತ ವಾರ್ಷಿಕ 360 ಕೋಟಿ ರೂ. ವೇತನ ಪಡೆಯಲಿದ್ದಾರೆ. ಇದಲ್ಲದೆ ಅವರ ಚಿತ್ರಗಳ ಹಕ್ಕು ಮತ್ತು ಪಿಎಸ್‌ಜಿ ತಂಡದಲ್ಲಿನ ಅವರ ನಂ. 30 ಜೆರ್ಸಿ ಮಾರಾಟದಿಂದ ಬರುವ ಆದಾಯದಲ್ಲೂ ಪಾಲು ದೊರೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net