

ನವದೆಹಲಿ: ಐಪಿಎಲ್-2025 ಸೀಸನ್‌ಗೆ ಇನ್ನೂ ಸಾಕಷ್ಟು ಸಮಯವಿದೆ. ಅದಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತದೆ ಮತ್ತು ಯಾರನ್ನು ಬಿಡುಗಡೆ ಮಾಡುತ್ತಾರೆ ಎಂದು ಎಲ್ಲ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಸಿಸಿಐ ಕೂಡ ಎಲ್ಲ ಫ್ರಾಂಚೈಸಿ ಮಾಲೀಕರೊಂದಿಗೆ ಸಭೆ ನಡೆಸಿದ್ದು, ಮೆಗಾ ಹರಾಜು ಕುರಿತು ಅವರೊಂದಿಗೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿದೆ.
ತಾಜಾ ಸಂಗತಿ ಏನೆಂದರೆ, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಟ್ಟು 84 ಪಂದ್ಯಗಳನ್ನು ನಡೆಸಲು ಬಿಸಿಸಿಐ ಯೋಜಿಸುತ್ತಿದೆ ಎಂಬ ವರದಿಗಳಿವೆ.
ಐಪಿಎಲ್ನಲ್ಲಿ ಎರಡು ಹೊಸ ತಂಡಗಳನ್ನು ಈಗಾಗಲೇ ಸ್ವಾಗತಿಸಿದ್ದೇವೆ. ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2022ರಲ್ಲಿ ಸೇರಿಕೊಂಡವು. ಆದಾಗ್ಯೂ, ಪಂದ್ಯಾವಳಿಯಲ್ಲಿ ಪಂದ್ಯಗಳ ಸಂಖ್ಯೆಯು ಪ್ರಮಾಣಾನುಗುಣವಾಗಿ ಹೆಚ್ಚಾಗಲಿಲ್ಲ. ಪ್ಲೇಆಫ್ ಮತ್ತು ಫೈನಲ್ ಸೇರಿದಂತೆ ಒಟ್ಟು 94 ಪಂದ್ಯಗಳು ನಡೆಯಬೇಕು. ಆದರೆ, ಪ್ರಸ್ತುತ ಸಂಖ್ಯೆ ಕಡಿಮೆ ಇರುವುದರಿಂದ ಪಂದ್ಯಗಳ ಸಂಖ್ಯೆ ಹೆಚ್ಚಿಸುವ ನಿರ್ಧಾರಕ್ಕೂ ಬರಲಾಗಿದೆ ಎನ್ನಲಾಗಿದೆ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್, ಆಟಗಾರರ ಕೆಲಸದ ಹೊರೆ ಮತ್ತು ಸೀಮಿತ ವಿರಾಮವನ್ನು ನೋಡಿದರೆ, ಇದು ಸವಾಲಾಗಬಹುದು. ಒಂದು ವೇಳೆ ಪಂದ್ಯಗಳ ಸಂಖ್ಯೆ ಹೆಚ್ಚಾದರೆ ಕ್ರೀಡಾಭಿಮಾನಿಗಳಿಗೆ ಮತ್ತಷ್ಟು ಮನರಂಜನೆ ಸಿಗಲಿದೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ ಷಾ, ಸದ್ಯಕ್ಕೆ ಇದಿನ್ನೂ ದೃಢಪಟ್ಟಿಲ್ಲ. ಐಸಿಸಿ ಮತ್ತು ಬಿಸಿಸಿಐ ಒಟ್ಟಾಗಿ ನಿರ್ಧರಿಸಲಿದೆ. ನಾವು ಆಟಗಾರರ ಕೆಲಸದ ಹೊರೆ ಮತ್ತು ವಿರಾಮವನ್ನು ಸಹ ಪರಿಗಣಿಸಬೇಕು. ಸದ್ಯಕ್ಕೆ ಇದು ಒಪ್ಪಂದದಲ್ಲಿದೆ ಆದರೆ ಅದನ್ನು ನಿರ್ಧರಿಸುವುದು ಬಿಸಿಸಿಐಗೆ ಬಿಟ್ಟದ್ದು ಎಂದು ಹೇಳಿದ್ದಾರೆ. ಅಲ್ಲದೆ, ಐಪಿಎಲ್ 2025ರಲ್ಲಿ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)