ಯುಎಇಯಲ್ಲಿ ಐಪಿಎಲ್​ ಆಯೋಜನೆಗೆ ಬಿಸಿಸಿಐ ಪ್ಲ್ಯಾನ್​ ಹೇಗಿದೆ ಗೊತ್ತಾ?

ipl13
Published on

ನವದೆಹಲಿ: ಭಾರತದಲ್ಲಿ ಕೊರನಾ ವೈರಸ್​ ಹಾವಳಿ ಹೆಚ್ಚುತ್ತಿರುವ ನಡುವೆ ಐಪಿಎಲ್​ 13ನೇ ಆವೃತ್ತಿಯನ್ನು ವಿದೇಶಕ್ಕೆ ಸ್ಥಳಾಂತರಿಸಲು ಬಿಸಿಸಿಐ ಸಿದ್ಧವಾಗಿದೆ. ಯುಎಇಯಲ್ಲಿ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಭರ್ಜರಿ ಯೋಜನೆಯನ್ನು ರೂಪಿಸಿದೆ. ಭಾರತ ತಂಡಕ್ಕೆ ಯುಎಇಯಲ್ಲಿ 4-6 ವಾರಗಳ ಶಿಬಿರವನ್ನೂ ಆಯೋಜಿಸುವ ಬಗ್ಗೆ ಬಿಸಿಸಿಐ ಅಲ್ಲಿನ ಕ್ರಿಕೆಟ್​ ಮಂಡಳಿಯೊಂದಿಗೆ ಮಾತುಕತೆ ನಡೆಸಿದೆ ಎನ್ನಲಾಗಿದೆ.

ಭಾರತ ತಂಡದ ಆಟಗಾರರು ಮಾತ್ರವಲ್ಲದೆ ಐಪಿಎಲ್​ನಲ್ಲಿ ಆಡಲಿರುವ ವಿದೇಶಿ ಆಟಗಾರರಿಗೂ ಯುಎಇಯಲ್ಲಿ ತರಬೇತಿಗೆ ವ್ಯವಸ್ಥೆಗಳನ್ನು ಸಜ್ಜುಗೊಳಿಸಲು ಬಿಸಿಸಿಐ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಯುಎಇಯಲ್ಲಿ ಐಪಿಎಲ್​ ಟೂರ್ನಿ ಮುಕ್ತಾಯಗೊಂಡ ಬಳಿಕ ಭಾರತ ತಂಡದ ಆಟಗಾರರು ದುಬೈನಿಂದ ನೇರವಾಗಿ ಆಸ್ಟ್ರೆಲಿಯಾ ಪ್ರವಾಸಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.

50 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳು ದಾಖಲಾಗಿರುವ ಯುಎಇಯಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯುಎಇಯಲ್ಲಿ ದುಬೈ, ಶಾರ್ಜಾ ಮತ್ತು ಅಬುದಾಭಿಯಲ್ಲಿ ಕ್ರಿಕೆಟ್​ ಕ್ರೀಡಾಂಗಣಗಳಿದ್ದು, ಈ ಮೂರು ಸ್ಥಳಗಳು ಹೆಚ್ಚು ಅಂತರದಲ್ಲಿಲ್ಲ. ಅಲ್ಲದೆ ಐಪಿಎಲ್​ನ 8 ತಂಡಗಳ ಆಟಗಾರರು ಉಳಿದುಕೊಳ್ಳಲು ಬೇಕಾದಷ್ಟು ಸೂಕ್ತ ಹೋಟೆಲ್​ ವ್ಯವಸ್ಥೆಗಳು ಕೂಡ ಅಲ್ಲಿ ಇವೆ. ಟೂರ್ನಿ ಆರಂಭಕ್ಕೆ ಒಂದು ತಿಂಗಳು ಮುನ್ನವೇ 8 ತಂಡಗಳ ಆಟಗಾರರು ಅಲ್ಲಿ ಒಗ್ಗೂಡುವ ನಿರೀಕ್ಷೆ ಇದೆ.

ಯುಎಇಯಲ್ಲಿ ಐಪಿಎಲ್​ ಆಯೋಜನೆಗೆ ಬಿಸಿಸಿಐ ಯೋಜನೆ ಹೀಗಿದೆ:

*ಟಿ20 ವಿಶ್ವಕಪ್​ ಅಧಿಕೃತವಾಗಿ ಮುಂದೂಡಿಕೆಯಾದ ಬೆನ್ನಲ್ಲೇ ಐಪಿಎಲ್​ 13ನೇ ಆವೃತ್ತಿಯನ್ನು ಯುಎಇಯಲ್ಲಿ ಆಯೋಜಿಸುವ ಬಗ್ಗೆ ಪ್ರಕಟಣೆ.

*ಭಾರತದ 30-35 ಅಗ್ರ ಆಟಗಾರರಿಗೆ ಮೊದಲಿಗೆ ದುಬೈನಲ್ಲಿ ತರಬೇತಿ ಶಿಬಿರ ಆಯೋಜನೆ.

*ಆಗಸ್ಟ್​ 3ನೇ ವಾರದಿಂದ ದುಬೈನಲ್ಲಿ ಭಾರತ ತಂಡದ ಶಿಬಿರ ಆಯೋಜನೆಗೆ ಯೋಜನೆ. ಇದು ಸೆಪ್ಟೆಂಬರ್​ ಮಧ್ಯಭಾಗದವರೆಗೆ ಮುಂದುವರಿಯಲಿದೆ.

*ಭಾರತ ತಂಡದ ಶಿಬಿರ ಮುಗಿದ ಬಳಿಕ ಆಟಗಾರರು ತವರಿಗೆ ವಾಪಸಾಗದೆ ಅಲ್ಲೇ ಉಳಿಯಲಿದ್ದು, ತಮ್ಮ ತಮ್ಮ ಐಪಿಎಲ್​ ಫ್ರಾಂಚೈಸಿಗಳನ್ನು ಕೂಡಿಕೊಳ್ಳಲಿದ್ದಾರೆ.

*ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್​ 26ರಿಂದ ನವೆಂಬರ್​ 8ರವರೆಗೆ ಐಪಿಎಲ್​ 13ನೇ ಆವೃತ್ತಿ ಯುಎಇಯಲ್ಲಿ ಆಯೋಜನೆ.

*ಐಪಿಎಲ್​ ಮುಕ್ತಾಯಗೊಂಡ ಬಳಿಕ ಭಾರತ ತಂಡದ ಆಟಗಾರರು ದುಬೈನಿಂದ ನೇರವಾಗಿ ಆಸ್ಟ್ರೆಲಿಯಾ ಪ್ರವಾಸಕ್ಕೆ ಪ್ರಯಾಣ.

ಬಿಸಿಸಿಐ ಯೋಜನೆಗಳ ಬಗ್ಗೆ ಇನ್ನೂ ಅಧಿಕೃಕವಾಗಿ ಚರ್ಚೆಗಳು ನಡೆದಿಲ್ಲ. ಆದರೆ ದಿನಕಳೆದಂತೆ ಭಾರತದಲ್ಲಿ ಟೂರ್ನಿ ಆಯೋಜಿಸುವ ಸಾಧ್ಯತೆಗಳು ಕಡಿಮೆಯಾಗುತ್ತ ಸಾಗುತ್ತಿರುವುದರಿಂದ ಈ ಯೋಜನೆಯೇ ಸದ್ಯಕ್ಕೆ ಬಲವಾಗುತ್ತಿದೆ. ಒಂದು ವೇಳೆ ಭಾರತದಲ್ಲಿ ಕರೊನಾ ವೈರಸ್​ ಹಾವಳಿ ಪ್ರಗತಿಯಲ್ಲಿ ನಿಯಂತ್ರಣಕ್ಕೆ ಬಂದರೆ ಮಾತ್ರ ಇಲ್ಲೇ ಆಯೋಜನೆಯಾಗಲಿದೆ ಎನ್ನಲಾಗಿದೆ. ಶುಕ್ರವಾರ ನಡೆಯಲಿರುವ ಬಿಸಿಸಿಐ ಅಪೆಕ್ಸ್​ ಕೌನ್ಸಿಲ್​ ಸಭೆಯಲ್ಲಿ ಈ ಯೋಜನೆಯ ಬಗ್ಗೆ ಅಧಿಕೃತವಾಗಿ ಚರ್ಚೆಯಾಗುವ ನಿರೀಕ್ಷೆ ಇದೆ.

ಯುಎಇಯಲ್ಲಿ ಐಪಿಎಲ್​ ಆಯೋಜನೆ ಇದೇ ಮೊದಲಲ್ಲ. ಈ ಹಿಂದೆ 2014ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ಸಮಯದಲ್ಲಿ ಐಪಿಎಲ್​ ಟೂರ್ನಿಯ ಮೊದಲಾರ್ಧ ಯುಎಇಯಲ್ಲೇ ನಡೆದಿತ್ತು. ಆದರೆ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯನ್ನು ಅಧಿಕೃತವಾಗಿ ಮುಂದೂಡುವವರೆಗೆ ಬಿಸಿಸಿಐಗೆ ಈ ಯೋಜನೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net