

ಮ್ಯಾಂಚೆಸ್ಟರ್: ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದಕ್ಕಾಗಿ ಇಂಗ್ಲೆಂಡ್ನಲ್ಲಿ ಈಗ ಜೈವಿಕ-ಸುರಕ್ಷಾ ವಾತಾವರಣವನ್ನು ನಿರ್ಮಿಸಿಕೊಳ್ಳಲಾಗಿದೆ. ಅಂದರೆ ಕರೊನಾ ಪರೀಕ್ಷೆ ಮುಗಿಸಿ ನೆಗೆಟಿವ್ ವರದಿ ಬಂದ ಎಲ್ಲರೂ ಒಂದು ನಿರ್ದಿಷ್ಟ ವಲಯದಲ್ಲಿ ಇರಬೇಕು. ಆದರೆ ಇಂಗ್ಲೆಂಡ್ ತಂಡ ವೇಗಿ ಜೋಫ್ರಾ ಆರ್ಚರ್ ಅವರು ಈಗ ಈ ಜೈವಿಕ-ಸುರಕ್ಷಾ ವಾತಾವರಣದಿಂದ ಹೊರಹೋಗಿ ನಿಯಮಾವಳಿ ಉಲ್ಲಂಘಿಸಿದ್ದಾರೆ. ಅದರ ಪರಿಣಾಮವಾಗಿ ಗುರುವಾರ ಆರಂಭಗೊಳ್ಳುತ್ತಿರುವ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ಸೌಥಾಂಪ್ಟನ್ನ ಜೈವಿಕ ಸುರಕ್ಷಾ ವಾತಾವರಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಯಶಸ್ವಿಯಾಗಿ ಮುಕ್ತಾಯ ಕಂಡಿದ್ದು, 2ನೇ ಪಂದ್ಯಕ್ಕಾಗಿ ಉಭಯ ತಂಡಗಳು ಮತ್ತು ಆಟಗಾರರು ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದ ಆವರಣಕ್ಕೆ ಶಿಫ್ಟ್ ಆಗಿದ್ದಾರೆ. ಈ ನಡುವೆ ವಿಂಡೀಸ್ ಮೂಲದ ವೇಗಿ ಆರ್ಚರ್ ಬಯೋ-ಸೆಕ್ಯೂರ್ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ. ಇದರಿಂದಾಗಿ ಅವರು ಇನ್ನು 5 ದಿನಗಳ ಕಾಲ ಐಸೋಲೇಷನ್ನಲ್ಲಿ ಇರಬೇಕಾಗಿದೆ. ಇದೇ ಅವಧಿಯಲ್ಲಿ ಅವರು 2 ಬಾರಿ ಕೋವಿಡ್-19 ಪರೀಕ್ಷೆಗೂ ಒಳಪಡಲಿದ್ದಾರೆ. ಇವೆರಡರಲ್ಲೂ ನೆಗೆಟಿವ್ ವರದಿ ಬಂದರೆ ಅವರು ಮತ್ತೆ ಜೈವಿಕ-ಸುರಾ ವಾತಾವರಣದೊಳಗೆ ಬರಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ.
ತಮ್ಮಿಂದ ಆದ ತಪ್ಪಿಗೆ 25 ವರ್ಷದ ಆರ್ಚರ್ ಈಗಾಗಲೆ ಕ್ಷಮೆಯಾಚಿಸಿದ್ದಾರೆ. 'ನಾನು ಮಾತ್ರವಲ್ಲದೆ ಇಡೀ ತಂಡ ಮತ್ತು ಮ್ಯಾನೇಜ್ಮೆಂಟ್ ಅನ್ನು ಅಪಾಯಕ್ಕೆ ತಳ್ಳಿರುವೆ. ನನ್ನ ವಿರುದ್ಧದ ಕ್ರಮಗಳನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವೆ. ಬಯೋ-ಸೆಕ್ಯೂರ್ ಬಬಲ್ನಲ್ಲಿರುವ ಎಲ್ಲರ ಬಳಿಯೂ ಕ್ಷಮೆಯಾಚಿಸಲು ಬಯಸುತ್ತೇನೆ' ಎಂದು ಆರ್ಚರ್ ತಿಳಿಸಿದ್ದಾರೆ. ಅವರು ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ವಿಕೆಟ್ ಗಳಿಸದಿದ್ದರೂ, 2ನೇ ಇನಿಂಗ್ಸ್ನಲ್ಲಿ 3 ಪ್ರಮುಖ ವಿಕೆಟ್ಗಳನ್ನು ಕಬಳಿಸಿ ವಿಂಡೀಸ್ ಪಾಳಯದಲ್ಲಿ ಸೋಲಿನ ಭೀತಿ ಹುಟ್ಟಿಸಿದ್ದರು. ಕಳೆದ ವರ್ಷದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಸೂಪರ್ ಓವರ್ಅನ್ನು ಆರ್ಚರ್ ಅವರೇ ಬೌಲಿಂಗ್ ಮಾಡಿದ್ದರು.