ಇದನ್ನು ತಕ್ಷಣವೇ ನಿಲ್ಲಿಸಿ… ಐಪಿಎಲ್​ ತಂಡಗಳು ಮತ್ತು ಆಟಗಾರರಿಗೆ ಖಡಕ್​ ಎಚ್ಚರಿಕೆ ನೀಡಿದ ಬಿಸಿಸಿಐ!

BCCI IPL
Published on

ನವದೆಹಲಿ: ಪ್ರಸಕ್ತ ಟೂರ್ನಿಯ ಐಪಿಎಲ್​ ಪಂದ್ಯಗಳು ಬಿರುಸಿನಿಂದ ನಡೆಯುತ್ತಿವೆ. ಪ್ರತಿಯೊಂದು ಪಂದ್ಯವೂ ಕೊನೆಯ ಹಂತದವರೆಗೂ ಕ್ರಿಕೆಟ್ ಅಭಿಮಾನಿಗಳಿಗೆ ಸಂಪೂರ್ಣ ಮನರಂಜನೆಯನ್ನು ನೀಡುತ್ತಿದೆ. ಯಾವ ತಂಡ ಗೆಲ್ಲುತ್ತದೆ ಎಂದು ಕೊನೆ ಕ್ಷಣದವರೆಗೂ ಹೇಳುವುದು ಕಷ್ಟಕರವಾಗಿದೆ. ಒಂದೆಡೆ ಐಪಿಎಲ್ ಬಿರುಸಿನಿಂದ ಸಾಗುತ್ತಿದ್ದರೆ ಇನ್ನೊಂದೆಡೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ ತಂಡಗಳಿಗೆ ಖಡಕ್​ ವಾರ್ನಿಂಗ್ ನೀಡಿದೆ.

ಪಂದ್ಯಗಳಿಗೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಬಿಸಿಸಿಐ ಸೂಚನೆಗಳನ್ನು ನೀಡಿದೆ. ಯಾವುದೇ ತಂಡ ಈ ನಿಯಮಗಳನ್ನು ಉಲ್ಲಂಘಿಸಿದರೆ ಭಾರಿ ದಂಡ ವಿಧಿಸಲಾಗುವುದು ಎಂದು ಬಿಸಿಸಿಐ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ. ಬಿಸಿಸಿಐ ಐಪಿಎಲ್ ತಂಡಗಳಿಗೆ ಮಾತ್ರವಲ್ಲದೆ ಆಯಾ ತಂಡಗಳ ಕಾಮೆಂಟೇಟರ್‌ಗಳು, ಆಟಗಾರರು ಮತ್ತು ಆಯಾ ತಂಡದ ಸಾಮಾಜಿಕ ಮಾಧ್ಯಮ ಬಳಗಕ್ಕೂ ಈ ಆದೇಶಗಳನ್ನು ನೀಡಿದೆ.

ಐಪಿಎಲ್​ ಪ್ರಸಾರ ಹಕ್ಕುಗಳಿಗಾಗಿ ಪ್ರಸಾರಕರು ಬಿಸಿಸಿಐಗೆ ಭಾರಿ ಮೊತ್ತವನ್ನು ಪಾವತಿಸುತ್ತಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋಗಳನ್ನು ಶೇರ್ ಮಾಡುವುದರಿಂದ ನಷ್ಟವಾಗುವ ಅಪಾಯವಿದೆ. ಕೆಲವೊಮ್ಮೆ ಕೆಲ ಕಾಮಂಟೇಟರ್​ಗಳು ಇನ್​ಸ್ಟಾಗ್ರಾಂನಲ್ಲಿ ಲೈವ್ ಪಂದ್ಯದ ಅಪ್​ಡೇಗಳನ್ನು ಪೋಸ್ಟ್​ ಮಾಡುತ್ತಾರೆ. ಆದರೆ, ಯಾರಾದರೂ ನಿಯಮಗಳನ್ನು ಉಲ್ಲಂಘಿಸಿದರೆ, ಅವರಿಗೆ ಮತ್ತು ಆಯಾ ಫ್ರಾಂಚೈಸಿಗಳಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಇತ್ತೀಚೆಗೆ, ಕೆಲವು ಆಟಗಾರರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಂದ್ಯದ ದಿನದ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಕೂಡಲೇ ಆ ಫೋಟೋಗಳನ್ನು ತೆಗೆಯುವಂತೆ ಬಿಸಿಸಿಐ ಅಧಿಕಾರಿಗಳು ಸಂಬಂಧಪಟ್ಟ ಆಟಗಾರರಿಗೆ ಆದೇಶ ಹೊರಡಿಸಿದೆ ಎಂದು ಹೇಳಲಾಗಿದೆ.

ಪ್ರಸಕ್ತ ಐಪಿಎಲ್​ ಸೀಸನ್​ನಲ್ಲಿ ಪ್ರತಿ ಪಂದ್ಯವೂ ರೋಚಕವಾಗಿರುವುದರಿಂದ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಪ್ರತಿ ಪಂದ್ಯದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಪ್​ಡೇಟ್​ ಸಿಗದಿದ್ದಾಗ ನೇರವಾಗಿ ಜಿಯೋ ಅಪ್ಲಿಕೇಶನ್ ಅಥವಾ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು ಬಯಸುತ್ತಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಡೇಟ್‌ಗಳು ಲಭ್ಯವಾಗುತ್ತಿರುವುದರಿಂದ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಆಯಾ ಪ್ರಸಾರ ಸಂಸ್ಥೆಗಳು ಬಿಸಿಸಿಐಗೆ ದೂರು ನೀಡಿವೆ ಎಂದು ವರದಿಯಾಗಿದೆ.

ಇದರ ಹಿನ್ನೆಲೆಯಲ್ಲಿ ಬಿಸಿಸಿಐ ಐಪಿಎಲ್‌ನ ಹತ್ತು ಫ್ರಾಂಚೈಸಿಗಳಿಗೆ ಹಾಗೂ ಆಟಗಾರರು ಮತ್ತು ಕಾಮೆಂಟೇಟರ್‌ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡದಂತೆ ಆದೇಶ ಹೊರಡಿಸಿದೆ. 2023 ರಿಂದ 2027 ರವರೆಗಿನ ಐಪಿಎಲ್ ಪ್ರಸಾರದ ಹಕ್ಕುಗಳಿಗಾಗಿ ಸ್ಟಾರ್ ಇಂಡಿಯಾ 23,575 ಕೋಟಿ ರೂ. ಮತ್ತು ಜಿಯೋ ಆಪ್ (ವಯಾಕಾಮ್) ಬಿಸಿಸಿಐಗೆ 20,500 ರೂ. ಕೋಟಿಗಳನ್ನು ಪಾವತಿಸಿದೆ. ಪ್ರಸಾರದ ಹಕ್ಕನ್ನು ಖರೀದಿಸಿದ ಕಂಪನಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ಬಿಸಿಸಿಐ ಕರ್ತವ್ಯವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net