

ಹೈದರಾಬಾದ್: ಗಂಡ-ಹೆಂಡತಿಯ ನಡುವಿನ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತನ್ನು ನೀವು ಕೇಳಿರುತ್ತೀರಿ. ದಂಪತಿ ಮಧ್ಯೆ ಜಗಳ ಸಾಮಾನ್ಯ. ಒಬ್ಬರನ್ನೊಬ್ಬರು ಶಪಿಸುವುದು, ಹೊಡೆದಾಡುವುದು ಹಾಗೂ ಕೈಗೆ ಸಿಕ್ಕ ವಸ್ತುಗಳನ್ನು ಬಿಸಾಡುತ್ತಾರೆ. ಪತ್ನಿಗೆ ಕೋಪ ಬಂದರೆ, ತವರು ಮನೆಗೆ ಹೋಗಿಬಿಡುತ್ತಾಳೆ. ಅದೇ ರೀತಿ ಗಂಡನಿಗೆ ಕೋಪ ಬಂದರೆ, ಕುಡಿದು ಗಲಾಟೆ ಮಾಡುತ್ತಾನೆ. ಆದರೆ, ಇದೆಲ್ಲವು ಕ್ಷಣಿಕ. ಅಷ್ಟೇ ಬೇಗನೆ ಒಂದಾಗಿಬಿಡುತ್ತಾರೆ. ಆದರೆ, ಇಲ್ಲೊಬ್ಬ ಪತಿರಾಯ ಪತ್ನಿ ಹೊಡೆದಳು ಅಂತಾ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪತ್ನಿಯ ಹಲ್ಲೆಯನ್ನು ಸಹಿಸದ ನಾಗೇಶ್ ಎಂಬಾತ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೆಲಂಗಾಣದ ಮೇಡ್ಚಲ್ ಜಿಲ್ಲೆಯ ಕೊಂಪಲ್ಲಿಯಲ್ಲಿ ಈ ಘಟನೆ ನಡೆದಿದೆ. ಹೊಂಡಕ್ಕೆ ಜಿಗಿದು ಸಾಯಲು ಯತ್ನಿಸುತ್ತಿದ್ದ ನಾಗೇಶ್ನನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಗ್ಗದ ಸಹಾಯದಿಂದ ನಾಗೇಶ್ನನ್ನು ಹೊಂಡದಿಂದ ಹೊರಗೆ ಕರೆತಂದು ಏನಾಯಿತು ಎಂದು ವಿಚಾರಿಸಿದ್ದಾರೆ.
ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯಾ ಎಂದು ಪ್ರಶ್ನಿಸಿದಾಗ, ನನ್ನ ಹೆಂಡತಿ ನನಗೆ ಹೊಡೆಯುತ್ತಾಳೆ. ನಾನು ತೀವ್ರ ಅಸ್ವಸ್ಥನಾಗಿದ್ದೇನೆ. ಮಕ್ಕಳನ್ನು ಸಹ ನನ್ನ ಹತ್ತಿರ ಬಿಡುವುದಿಲ್ಲ. ನನ್ನನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಇದರಿಂದಾಗಿ ಮನನೊಂದು ಸಾವಿಗೆ ಶರಣಾಗುತ್ತಿದ್ದೇನೆ ಎಂದಿದ್ದಾನೆ.
ಇದೇ ಸಂದರ್ಭದಲ್ಲಿ ತನ್ನ ಅಂಗಿಯನ್ನು ಕಳಚಿ ಹೆಂಡತಿ ಹಲ್ಲೆ ಮಾಡಿರುವುದನ್ನು ಪೊಲೀಸರಿಗೆ ತೋರಿಸಿದ್ದಾನೆ. ಪತ್ನಿಯ ಕಿರುಕುಳ ಸಾಕಾಗಿದೆ. ಇದಕ್ಕೇನು ಪರಿಹಾರ? ನಾನು ಸಾಯಬೇಕಾ? ಸಾಯಬೇಕಾದರೆ ಸಾಯುತ್ತೇನೆ ಎಂದು ನಾಗೇಶ್ ತುಂಬಾ ನೋವಿನಿಂದ ಹೇಳಿಕೊಂಡರು. ಇದಕ್ಕೆ ಪರಿಹಾರವೇನು ಎಂದು ಕೇಳಿದಾಗ ಪತ್ನಿಗೆ ವಿಚ್ಛೇದನ ನೀಡುವಂತೆ ಕೆಲವರು ಹೇಳಿದ್ದಾರೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪತ್ನಿಯರೇ ಈ ರೀತಿ ಹಲ್ಲೆ ಮಾಡಿದರೆ ಗಂಡಂದಿರು ಬದುಕುವುದು ಹೇಗೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು, ಪ್ರಕರಣ ದಾಖಲಿಸಿಕೊಂಡು ಪತ್ನಿಗೆ ಸಮನ್ಸ್ ನೀಡಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್)